Tuesday, November 20, 2012

ಕುಡುಕ ಶೆಟ್ಟಿ


ಇವನ ಹೆಸರು ಬಸವಶೆಟ್ಟಿ. ಇವನು ಮಾಡುತ್ತಿದ್ದ ಕೆಲುವು ಕೆಲಸಗಳೆಂದರೆ: ಗಾರೆ ಕೆಲಸ, ಕಾವಲು ಕಾಯುವುದು. ಇದೆಲ್ಲಕ್ಕಿಂತ ಮುಖ್ಯವಾದ ಕೆಲಸವೆಂದರೆ ಕುಡಿತ! ಪ್ರತಿ ಸಂಜೆ ಪ್ಯಾಕೆಟ್ಟಿಗೆ ಖರ್ಚು ಮಾಡುವ ಕೆಲಸವನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ರಜೆ ಇದ್ದ ದಿನಗಳಲ್ಲು ನಿಷ್ಟೆಯಿಂದ ಕುಡಿಯುವ ಕೆಲಸ ಮುಂದುವರೆಯುತ್ತಿತ್ತು. ಆದರು ಇವನನ್ನು ಪ್ರಶಂಸಿಸಲೇಬೇಕು, ಕುಡಿತವನ್ನು ಎಷ್ಟೇ ಕ್ರಮಬದ್ದವಾಗಿ ಅನುಸರಿಸಿಕೊಂಡಿದ್ದರೂ ಜಾಸ್ತಿ ಹಣವನ್ನು ಪೋಲು ಮಾಡುತ್ತಿರಲಿಲ್ಲ. ದಿನಕ್ಕೆ ಎರಡು ಕ್ಷಮಿಸಿ ಎರಡೇ ಪಾಕೀಟು! ಅದು ಆ ಪಾಕೀಟಿನ ಮಹಿಮೆಯೋ ಅಥವಾ ಅವನ ಸಾಮರ್ಥ್ಯ ಕಡಿಮೆಯೋ ತಿಳಿಯದು, ಅವನು ಮಲಗುವ ತನಕ ಏರಿದ ಅಮಲಿನ ನಶೆಯುಕ್ತ ಕೊರಗು, ಆಟಗಳು, ಬೈಗುಳ ನಿಲ್ಲುತ್ತಲೆ ಇರಲಿಲ್ಲ. ತಾನು ನೆನಪಿಸಿಕೊಂಡವರಿಗೆಲ್ಲಾ ಹಿತವಚನಗಳನ್ನು ಒದರುತ್ತಿದ್ದ ಅಥವಾ ಸಿಕ್ಕಾಪಟ್ಟೆ ಬಯ್ಯುತ್ತಿದ್ದ. ಕೆಲವೊಮ್ಮೆ ರಾಜಕಾರಣಿಗಳಿಗೆ, ಕೆಲವೊಮ್ಮೆ ಚಿತ್ರನಟರಿಗೆ! ಬಹುಶಃ ಯಾರು ನೆನಪಿಗೆ ಬರದಿದ್ದರೆ ತನ್ನ ಮಡದಿಗೆ ಬಯ್ಯುತ್ತಿದ್ದ!

ವಾರಾಂತ್ಯದಲ್ಲೊಮ್ಮೆ ಮೈಸೂರಿನಲ್ಲಿದ್ದೆ, ಕೆಲಸ ಸಿಕ್ಕಿ ಸಂಬಳ ಬಂದಿದ್ದ ಸಮಯ. ಆ ಸಮಯದಲ್ಲೆ ಶೆಟ್ಟಿ ನಮ್ಮ ಮನೆಗೆ ಬಂದು ನನ್ನನ್ನು ಮಾತನಾಡಿಸಿ ಸಂಕೋಚವೇ ಇಲ್ಲದೆ ಬಹಳ ನೇರವಾಗೆ "ನಿಮಗೆ ಕೆಲಸ ಸಿಕ್ಕಿ ಸಂಬಳ ಬಂದಿದೆ, ನನಗೆ ಒಂದೆರಡು ಪಾಕೀಟಿಗೆ ದುಡ್ಡು ಕೊಡಿ ನಿಮಗೆ ಒಳ್ಳೆಯದಾಗಲಿ" ಎಂದು ಅಪೇಕ್ಷಿಸಿದ್ದ ಹಾಗು ಹಾರೈಸಿದ್ದ!. ನಾನು ದುಡ್ಡು ಕೊಡದಿದ್ದರೆ ಇವನು ಕುಡಿಯುವುದಂತು ಬಿಡುವುದಿಲ್ಲ, ಹೇಗಾದರು ಹಾಳಾಗಲಿ ಎಂದು ೨೦ರೂ ಕೊಟ್ಟೆ. ನನಗೆ ಮೊದಲ ಸಂಬಳ ಬಂದಾಗ ಆಗಿದ್ದಕ್ಕಿಂತ ಹೆಚ್ಚು ಖುಷಿಯನ್ನು ಅವನಲ್ಲಿ ನೋಡಿದೆ. ೨೦ರೂ ಗಳು ಅವನಲ್ಲಿ ಅಷ್ಟು ಖುಷಿ ಮೂಡಿಸಿತ್ತು! ಪಾಕೀಟಿನ ಮಹಿಮೆಯದು!

ಶೆಟ್ಟಿ ರಾತ್ರಿ ಹೊತ್ತಿನಲ್ಲಿ ನಮ್ಮ ಬಡಾವಣೆಯಲ್ಲಿ ಕಟ್ಟುತ್ತಿದ್ದ ಯಾವುದಾದರೊಂದು ಮನೆಯ ಕಾವಲು ಕಾಯುತ್ತಿದ್ದ. ಮನೆ ಕಟ್ಟುವವರು ಅದರ ಸನಿಹದಲ್ಲಿ ಒಂದು ಪುಟ್ಟ ತಾತ್ಕಾಲಿಕ ಕೋಣೆಯನ್ನು ಕಟ್ಟಿ ಆ ಕೋಣೆಯಲ್ಲಿ ಮನೆ ಕಟ್ಟಲು ಬೇಕಾಗುವ ಬಹಳಷ್ಟು ಸಾಮಾನುಗಳನ್ನು ಇಡುತ್ತಿದ್ದರು. ಬಹಳ ಪುಟ್ಟ ಕೋಣೆಯದು. ಶೆಟ್ಟಿ ಆ ಪುಟ್ಟ ಕೋಣೆಯಲ್ಲೆ ಮಲಗುತ್ತಿದ್ದ. ಪ್ರತಿ ದಿನ ತಪ್ಪದೆಯೆ ಕುಡಿದೇ ಮಲಗುತ್ತಿದ್ದ. ಆ ಸ್ಥಳಗಳಲ್ಲಿ ಕಳ್ಳತನವಾಗದೆ ಇರುತ್ತಿದ್ದುದು ಅವನ ಅದೃಷ್ಟವೇ ಸರಿ. ಅದು ಬೇಸಿಗೆ ಕಾಲ ನಮ್ಮ ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಮನೆಯೊಂದನ್ನು ಕಟ್ಟಲು ಶುರು ಮಾಡಿದ್ದರು. ಶೆಟ್ಟಿ ಒಂದು ಸಂಜೆ ಬಹಳ ಬೇಗನೆ ಕುಡಿದು ಕಟ್ಟುತ್ತಿದ್ದ ಮನೆಯ ಪಕ್ಕದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಕೋಣೆಯಲ್ಲಿ, ಸೆಕೆ ಬಹಳ ಇದ್ದುದರಿಂದ ಬಾಗಿಲನ್ನು ತೆರೆದು ಮಂಡಿಯ ಮೇಲಿನ ದೇಹವನ್ನು ಹೊಸಲಿನೊಳಗೆ ಬೀಳಿಸಿ, ಕೆಳಗಿನ ದೇಹವನ್ನು ಹೊಸಲಿನಿಂದಾಚೆ ಇರಿಸಿ ವಿಚಿತ್ರ ಭಂಗಿಯಲ್ಲಿ ಮಲಗಿದ್ದ! ಸಮಯ ಸುಮಾರು ೭:೩೦, ಇದ್ದಕ್ಕಿದ್ದ ಹಾಗೆ ಜೋರಾಗಿ ಕಿರುಚುತ್ತಾ ಆ ಕೋಣೆಯ ಬಾಗಿಲನ್ನು ಎಳೆದು, ಹೊರಗಿನಿಂದ ಚಿಲಕ ಹಾಕಿ ಅಮಲಿನ ನಲಿವಿನಿಂದಲೆ ಅಕ್ಕ ಪಕ್ಕದ ಮನೆಯ ಬಾಗಿಲನ್ನೆಲ್ಲಾ ಬಡಿದು "ಕಳ್ಳ ಕಳ್ಳ ಕೂಡಿ ಹಾಕಿದ್ದೇನೆ ಕಳ್ಳ ಕಳ್ಳ, ಪೋಲೀಸರಿಗೆ ಫೋನು ಮಾಡಿ" ಎಂದು ಕಿರುಚಾಡಿದ. ನೋಡು ನೋಡುತ್ತಿದ್ದಂತೆಯೆ ಬೀದಿಯವರೆಲ್ಲಾ ಸೇರಿಕೊಂಡರು! ವಿಚಾರಿಸಲು, ಶೆಟ್ಟಿಯು ನಶೆಯ ನೃತ್ಯ ಮಾಡುತ್ತಲೆ ಹೇಳಿದ "ಕಳ್ಳನ್ನನ್ನು ಒಳಗೆ ಕೂಡಿ ಹಾಕಿದ್ದೇನೆ, ನನ್ನ ಕಾಲನ್ನು ತುಳಿದು ಒಳಗೆ ಹಾರಿದ! ಅವನ ಕಾಲನ್ನು ಇವತ್ತು ಕತ್ತರಿಸುತ್ತೇನೆ ಎಳೆಯಿರಿ ಅವನನ್ನು ಹೊರಕ್ಕೆ ಹಾssss". ಬೀದಿಯಲ್ಲಿ ಸೇರಿದ್ದವರೆಲ್ಲಾ "ಕಳ್ಳನ ಹತ್ತಿರ ಚಾಕು ಇರಬಹುದು, ದೊಣ್ಣೆ ಇರಬಹುದು ಅಥವಾ ಇನ್ಯಾವುದಾದರು ಆಯುಧ ಇರಬಹುದು ಒಮ್ಮೆಗೆ ನುಗ್ಗಬೇಡಿ, ತಾಳ್ಮೆ. ಹೊರಗಿನಿಂದಲೇ ಮಾತನಾಡಿಸಿ" ಹೀಗೆ ಅವರವರ ಅಂಜಿಕೆ, ಕಾಳಜಿ, ಮುಂಜಾಗ್ರತೆಯ ಉಪಾಯಗಳನ್ನು ಹಂಚಿಕೊಂಡರು ಹಾಗು ಕಳ್ಳನನ್ನು ಮೊದಲು ಹೊರಗಿನಿಂದ ಮಾತನಾಡಿಸುವುದು ಸರಿಯೆಂದು ತೀರ್ಮಾನಿಸಿದರು!. ಗುಂಪಿನಲ್ಲಿದ್ದ ಪ್ರಮುಖರು ಕಟ್ಟುವ ಮನೆಯ ಸುತ್ತ ಬಿದ್ದಿದ್ದ ಪುಟ್ಟ ಬೊಂಬುಗಳನ್ನು ಹಿಡಿದು, ಕೋಣೆಯ ಪುಟ್ಟ ಕಿಟಕಿಯ ಬಳಿ ಹೋಗಿ "ಯಾರೋ ಒಳಗಿರಿವುದು ಮರ್ಯಾದೆಯಾಗಿ ಹೊರಗೆ ಬಂದರೆ ನಿನಗೂ ಒಳಿತು ನಮಗೂ ಒಳಿತು, ಹೆದರಬೇಡ. ನೀನಾಗೆ ಬಂದರೆ ನಾವು ಏನು ಮಾಡುವುದಿಲ್ಲ ಆದರೆ ನಾವೇ ಒಳಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡಿವುದಿಲ್ಲಾ, ನಿನ್ನನ್ನು ಕಂಬಕ್ಕೆ ಕಟ್ಟುತ್ತೇವೆ, ಹೊಡೆಯುತ್ತೇವೆ, ಪೋಲೀಸರಿಗೆ ಹಿಡಿದುಕೊಡುತ್ತೇವೆ!" ಹೀಗೆ ನಾನಾ ರೀತಿಯಲ್ಲಿ ಉದ್ಗರಿಸಿದರು. ಒಳಗಡೆಯಿಂದ ಒಂದು ಸೊಳ್ಳೆಯ ಶಬ್ದ ಕೂಡ ಕೇಳಲಿಲ್ಲ! ತಮಾಷೆ ಹೀಗೆ ಸುಮಾರು ೩೦ ನಿಮಿಷ ಮುಂದುವರಿಯಿತು. ಅಷ್ಟರಲ್ಲಿ ’ಗರುಡ’ ಜೀಪು ನಮ್ಮ ಬೀದಿಗೆ ಬಂತು. ಯಾರೋ ನಮ್ಮ ಬೀದಿಯವರೆ ದೂರವಾಣಿ ಕರೆ ಮಾಡಿದ್ದರು. ಈಗ ತೋರಿಕೆಯ ಸರದಿ ನಮ್ಮ ಬಡಾವಣೆಯ ಆರಕ್ಷಕರು ಹಾಗು ಶೆಟ್ಟಿಯದು! ಶೆಟ್ಟಿ ಹುಮ್ಮಸ್ಸಿನಲ್ಲಿದ್ದ. ಬಹುಶಃ ಕಳ್ಳ ಸಿಕ್ಕಿದ ಮೇಲೆ ತನಗೆ ಬಹುಮಾನವಾಗಿ ಪಾಕೀಟಿಗಾಗುವಷ್ಟು ಹಣ ಸಿಗಬಹುದು ಎಂದು ಎಣಿಸಿದ್ದನೋ ಏನೋ! "ಕಳ್ಳನ್ನನ್ನು ನಾನೆ ನೋಡಿದ್ದು, ನಾನೆ ಅವನನ್ನು ಒಳಗೆ ಕೂಡಿ ಹಾಕಿದ್ದೇನೆ" ಎಂದ. ನಿರೀಕ್ಷಕ ಹಾಗು ಪೇದೆಯೊಬ್ಬ ಕೋಣೆಯ ಬಳಿ ಇದ್ದವರನ್ನೆಲ್ಲಾ ದೂರ ಸರಿಸಿ, ಒಂದು ಬೊಂಬನ್ನು ಹಿಡಿದು (ಪೇದೆಗೆ ತನ್ನ ಲಾಠಿಯ ಮೇಲೆ ನಂಬಿಕೆ ಇರಲಿಲ್ಲವೇನೋ!)  ಕಿಟಕಿಯ ಬಳಿ ಹೋಗಿ ಬಡಾವಣೆಯ ಪ್ರಮುಖರೆಲ್ಲಾ ಉದ್ಗರಿಸಿದ ರೀತಿಯಲ್ಲೆ ಉದ್ಗರಿಸಿದರು! ಮತ್ತೆ ಕೋಣೆಯೊಳಗೆ ನಿಶ್ಯಬ್ದ. ಅವರಿಬ್ಬರಿಗೂ ಶೆಟ್ಟಿಯ ಚಾಳಿ ತಿಳಿದಿತ್ತು. "ಕುಡುಕ ನಶೆಯಲ್ಲಿ ಏನನ್ನು ಸ್ಪರ್ಷಿಸಿದನೋ, ಅವನ ಕಾಲ ಮೇಲೆ ಹಾವು ಹರಿಯಿತೋ, ಇಲ್ಲ ಕನಸು ಕಂಡನೋ" ಎಂದು ಗೊಣಗಿಕೊಂಡು ಬಾಗಿಲನ್ನು ತೆರೆದು ಒಳಗೆ ನೋಡಿದರು. ಯಾರೂ ಇಲ್ಲ! ಹತ್ತಿದ ಕೋಪವನ್ನೆಲ್ಲಾ ಪೋಲೀಸರು, ಪೋಲೀಸ್ ಬೈಗುಳಕ್ಕೆ ಪರಿವರ್ತಿಸಿ ಶೆಟ್ಟಿಯ ಮೇಲೆ ಹರಿಹಾಯ್ದರು. ಆದರೆ ಶೆಟ್ಟಿಯ ಅಚಲ ಆತ್ಮವಿಶ್ವಾಸಕ್ಕೆ ಇದಾವುದು ಧಕ್ಕೆ ಮಾಡಲಿಲ್ಲ. ಅವನು ಬಹಳ ತಣ್ಣಗೆ "ಸ್ವಾಮಿ ಒಳಗೆ ಕಳ್ಳ ಹೋಗಿದ್ದೇನೋ ನಿಜ, ಹೋಗಬೇಕಾದರೆ ನನ್ನ ಕಾಲನ್ನು ತುಳಿದಿದ್ದು ನಿಜ, ಈಗ ಒಳಗೆ ಯಾರು ಇಲ್ಲ ಅಂದರೆ ಅದು ದೆವ್ವ" ಎಂದ!

ಮೊದಲೇ ನಮ್ಮ ಬೀದಿಯ ಮಹಿಳೆಯರು ಇಂಥಾ ವಿಷಯಗಳಿಗೆ ಬಹಳ ಹೆದರುತ್ತಿದ್ದರು. ಆ ಸಂಜೆಯಿಂದ ಸುಮಾರು ೩-೪ ವಾರಗಳ ತನಕ ಕತ್ತಲೆಯಾದರೆ ಒಬ್ಬೊಂಟಿಯಾಗಿ ಅವರು ನಮ್ಮ ಬೀದಿಯಲ್ಲಿ ನಡೆಯುತ್ತಲೇ ಇರಲಿಲ್ಲ! ಶೆಟ್ಟಿ ಈ ಘಟನೆಯ ನಂತರ ಮತ್ತೆಂದು ಆ ಕೋಣೆಯಲ್ಲಿ ಮಲಗಲೂ ಇಲ್ಲ!

No comments:

Post a Comment