Monday, January 7, 2013

ಭೂತ ಬೇಟೆ


ಮನುಷ್ಯರನ್ನು ತರಾವರಿ ಗುಂಪುಗಳಲ್ಲಿ ವಿಂಗಡಿಸಬಹುದು. ಭೂತದ ವಿಷಯ ಬಂದರೆ ನನ್ನ ಪ್ರಕಾರ ಮನುಷ್ಯರನ್ನು ೨ ಗುಂಪುಗಳಲ್ಲಿ ವಿಂಗಡಿಸಬಹುದು. ಒಂದು, ಭೂತವನ್ನು ನೋಡಿರುವವರು. ಮತ್ತೊಂದು ಭೂತವನ್ನು ನೋಡಿಲ್ಲದಿರುವವರು. ಈ ಭೂತವನ್ನು ನೊಡಿಲ್ಲದವರಲ್ಲೂ ೨ ಗುಂಪುಗಳನ್ನು ಕಾಣಬಹುದು. ಭೂತವನ್ನು ಕಾಣಲು ಬಯಸುವವರು ಹಾಗು ಆ ವಿಷಯದಿಂದ ದೂರ ಸರಿಯುವವರು. ನಾನು ಹಾಗು ನನ್ನ ಆಪ್ತಮಿತ್ರರಾದ ಶೀತಲ್ ಹಾಗು ಪುನೀತ್ ಭೂತವನ್ನು ನೋಡಿಲ್ಲದವರಲ್ಲಿ ಮೊದಲನೆ ಗುಂಪಿನವರು, ಬಹುಶಃ ನೋಡಿದರೂ ನಂಬುತ್ತೇವೋ ಇಲ್ಲವೋ  ಆ ಸಮಯವೇ ಉತ್ತರಿಸಬೇಕು!.

ಗಣಪತಿ ಹಬ್ಬದ ಸಮಯ, ನಮ್ಮ ಮೈಸೂರಿನ ಶಕ್ತಿ ನಗರದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಚಂದ ವಸೂಲಿ ಮಾಡಿ ಸಾರ್ವಜನಿಕವಾಗಿ ಗಣಪತಿ ಕೂರಿಸಿ ಪೂಜೆ ಮಾಡಿಸುವುದು, ದುಡ್ಡು ಉಳಿದರೆ ಚಿಕ್ಕ ಕಾರ್ಯಕ್ರಮಗಳನ್ನು ಆಯೋಜಿಸುವುದು ನಮಗೆ ವರ್ಷ ವರ್ಷದ ಜವಾಬ್ದಾರಿ. ಅದು ನಮಗೆ ೨ನೇ ವರ್ಷದ ಉತ್ಸವ. ನಮ್ಮ ಬಡಾವಣೆಯ ಪ್ರತಿ ಮನೆಗೂ ಹೋಗಿ ತೆಂಗಿನಮರದ ಗರಿಗಳನ್ನು ಪಡೆದು ಅವನ್ನೆಲ್ಲಾ ಹೆಣೆದು ಬೊಂಬುಗಳ ಜೊತೆ ನಮ್ಮ ಉದ್ಯಾನವನದಲ್ಲಿ ದೊಡ್ಡ ಗುಡಿಸಲನ್ನೇ ನಿರ್ಮಿಸಿ ಅದರೊಳಗೆ ಗಣಪತಿಯನ್ನು ಕೂರಿಸುತ್ತಿದ್ದೆವು ಹಾಗೂ ರಾತ್ರಿ ಹೊತ್ತು ಗಣಪತಿ ಮತ್ತು ಪೂಜೆ ಸಾಮಗ್ರಿಗಳನ್ನು ಕಾಯಲು ೩-೪ ಜನ ಆ ಗುಡಿಸಲಿನ ಒಳಗೆ ಮಲಗುತ್ತಿದ್ದೆವು. ಉದ್ಯಾನವನದಿಂದ ಸುಮಾರು ೫೦ ಗಜ ದೂರದಲ್ಲಿದ್ದ ಮನೆಯಲ್ಲಿ ಡಿಗ್ರಿ ಓದುತ್ತಿದ್ದ ಹುಡುಗಿ ಸ್ವಲ್ಪ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ಮನೆಯಲ್ಲಿ ಅವಳ ಆತ್ಮ ಸುತ್ತಾಡುತ್ತಿರುವುದೆಂದು ಆ ಬೀದಿಯಲ್ಲಿ ಯಾರು ಓಡಾಡಬಾರದೆಂದು ಅದಾಗಲೆ ಗಾಳಿಸುದ್ದಿ ಹಬ್ಬಿತ್ತು!! ಮನೆಗು ಬೀಗ ಜಡಿದಾಗಿತ್ತು! ನನಗೆ, ಶೀತಲ್‌ಗೆ ಹಾಗೂ ಪುನೀತ್‌ಗೆ ಅದನ್ನು ಪರೀಕ್ಷಿಸಲೇಬಿಡಬೇಕೆಂಬ ಉತ್ಸಾಹ. ಹೇಗೂ ರಾತ್ರಿಹೊತ್ತಿಗೆ ಗುಡಿಸಲಿನಲ್ಲಿ ಮಲಗಲು ಬರುತ್ತೇವೆ, ೧೨ ಘಂಟೆಯ ಮೇಲೆ ಆ ಭೂತ ಬೀದಿಗೆ, ಭೂತ ಭೇಟಿಗಾಗಿ, ಭೂತ ಬೇಟೆಗೆ ತಯರಾಗುವ ರೀತಿಯಲ್ಲಿ  ತಯಾರಾದೆವು!

ಗುಡಿಸಲಿನಲ್ಲಿ ನಾವೆಲ್ಲಾ ಮಾತನಾಡುತ್ತಾ ಮಲಗಿದ್ದೆವು. ಯಾರೂ ನಿದ್ದೆ ಮಾಡಿರಲಿಲ್ಲ. ನಮ್ಮ ಜೊತೆ, ಸ್ನೇಹಿತನಾದ ಪ್ರಸಾದಿ ಕೂಡ ಇದ್ದ. ನಾವು ವಿಷಯ ತಿಳಿಸಿ ಅವನನ್ನು ಕರೆದೆವು. ಆದರೆ ಅವನು ನಮಗೆ ಹಿತವಚನಗಳನ್ನು ನೀಡಿ ಹೊರಗೆ ಹೋಗಬಾರದೆಂದು ಉಪದೇಶಿಸಿದನು. ನಾವು ಅವನನ್ನು ಬಿಟ್ಟು ಮೂವರು ೧೨ ಘಂಟೆಯಾದ ಮೇಲೆ ಹೋಗುವುದೆಂದು ತೀರ್ಮಾನಿಸಿದೆವು. ಹೊರಡುವ ಸಮಯ ಬಂತು. ಹೊರಗೆ ಬಹಳ ಚಳಿ ಇದ್ದುದರಿಂದ ಹೊದಿಕೆಗಳನ್ನು ನಮ್ಮ ಭುಜದ ಸುತ್ತಾ ಬಳಸಿಕೊಂಡು ಗುಡಿಸಲಿನಿಂದ ಹೊರನಡೆದೆವು. ಹೋಗುವ ಮೊದಲು ಪ್ರಸಾದಿಯಿಂದ ಮತ್ತೊಮ್ಮೆ ಅದೇ ಉಪದೇಶ ಹೊರಬಿದ್ದಿತು. ಅದನ್ನು ಆಲಿಸದೆ ಭೂತ ಬೀದಿಗೆ ಹೆಜ್ಜೆ ಇಟ್ಟೆವು. ಬಹಳಷ್ಟು ದೆವ್ವಗಳ ಸಿನಿಮಾಗಳನ್ನು ನೋಡಿದ್ದ ನಾನು ನನ್ನ ಕಲ್ಪನೆಗಳಲ್ಲೆ ಮುಂದೆ ಸಾಗಿದೆ. ಆದರೆ ಆ ರೀತಿಯ ಯಾವ ಕ್ಷಣಗಳು ಎದುರಾಗಲಿಲ್ಲ! ಭೂತ ಭೇಟಿ - ಬೇಟೆ - ದರ್ಶನ ಯಾವುದು ಆಗಲಿಲ್ಲ! ಸುಮ್ಮನೆ ನಿದ್ದೆಗೆಟ್ಟು ಬಂದೆವು ಎಂದು ನಮ್ಮನ್ನು ನಾವೇ ದೂಷಿಸುತ್ತಾ ಒಂದು ಸುತ್ತು ಹೊಡೆದು ಪಕ್ಕದ ಬೀದಿಯಿಂದ ಉದ್ಯಾನವನಕ್ಕೆ ವಾಪಸಾಗುತ್ತಿದ್ದೆವು. ಆ ಬೀದಿಯಲ್ಲಿ ನಮ್ಮ ಸ್ನೇಹಿತ ಹೇಮಂತನ ಮನೆ ಇತ್ತು. ಆಗ ಅವನಿನ್ನು ವೈದ್ಯ ವಿದ್ಯಾರ್ಥಿ. ಅವನು ಪ್ರತೀ ದಿನ ಬೆಳಗಿನ ಜಾವ ೪-೫ ಘಂಟೆಯ ತನಕ ಓದುತ್ತಿದ್ದ! ಅವನ ಕೋಣೆಯ ದೀಪ ಉರಿಯುತ್ತಿದ್ದುದು ದೂರದಿಂದಲೆ ಕಾಣಿಸಿತು. ಅವನ ಕೋಣೆಯ ಕಿಟಕಿಯು ಮನೆಯ ಸುತ್ತುಗೋಡೆಗೆ ಬಹಳ ಹತ್ತಿರವಿದ್ದುದರಿಂದ ನಾವು ಹೊರಗಡೆಯೆ ನಮ್ಮ ಹೊದಿಕೆಗಳನ್ನು ತಲೆಯಮೇಲಿಂದ ಬಳಸಿ ಅವನಿಗೆ ಕಿಟಕಿಯಿಂದ ಕಾಣುವ ಹಾಗೆ ನಿಂತು ಮೆಲುದನಿಯಲ್ಲಿ "ಚಿಚಿಚ್‍ಚ್‌ಚ್ ಚಿಚಿಚ್‍ಚ್‌ಚ್ ಉಮ್‌ಮ್‌ಮ್ssssssssssssss" ಎಂದು ಶಬ್ದ ಮಾಡಿದೆವು. ಅವನಿಗೆ ಏನೋ ಶಬ್ದವಾದಂತೆ ಭಾಸವಾಯಿತು ಆದರೆ ಭ್ರಮೆಯೆಂಬಂತೆ ಮತ್ತೆ ಓದಲು ಮುಂದುವರಿಸಿದನು! ನಮಗೆ ನಗೆ ಉಕ್ಕಿ ಸಮಾಧಾನವಾಗಲು ನಿಮಿಷಗಳೆ ಹಿಡಿಯಿತು. ಜೋರಾಗಿ ನಗದೆ ಮೆಲ್ಲಗೆ ನಗುತ್ತಾ ಸಮಾಧಾನವಾದ ಮೇಲೆ ಮತ್ತೆ ಅದೇ ರೀತಿ ಶಬ್ದ ಮಾಡಿದೆವು! ಈ ಸಲ ಹೇಮಂತನಿಗೆ ಕಿಟಕಿ ಕಡೆಯಿಂದ ಶಬ್ದ ಬರುತ್ತಿರುವುದು ಖಾತ್ರಿಯಾಗಿ ತಿರುಗಿ ನೋಡಿದನು ಹಾಗೂ ನೋಡಿದ ತಕ್ಷಣ ಒಮ್ಮೆಲೆ ಬೆಚ್ಚಿ ಅದುರಿದನು. ನಮ್ಮ ಪುಣ್ಯ ಜೋರಾಗಿ ಕಿರುಚಿ ಕೈಯ್ಯಲ್ಲಿದ್ದ ಪುಸ್ತಕವನ್ನು ಎಸೆಯಲಿಲ್ಲ! ಸೆರಗು ಹೊದ್ದ ಗಂಡಸಿನ ರೂಪದಲ್ಲಿರುವ ಮೋಹಿನಿಗಳಂತೆ ಅವನನ್ನು ನೋಡುತ್ತಾ ಹಲ್ಲು ಕಿರಿಯುತ್ತಿದ್ದೆವು! ಎಷ್ಟೆ ಆದರು ವೈದ್ಯನಲ್ಲವೇ! ಅದುರಿದ ಸ್ವಲ್ಪ ಕ್ಷಣದಲ್ಲೆ ನಮ್ಮನ್ನು ಕಂಡುಹಿಡಿದು ನಗುತ್ತಾ "ನೀವೇನೋ" ಎಂದು ಶುರು ಮಾಡಿ ನಾಲ್ಕಾರು ಮಾತನಾಡಿದನು. ನಾವು ಓದನ್ನು ಮುಂದುವರಿಸಲು ಹೇಳಿ ಉದ್ಯಾನವನದ ಕಡೆಗೆ ನಡೆದೆವು. ನಡೆಯುತ್ತಿರಬೇಕಾದರೆ ಮೂವರಿಗು ಗಮನಕ್ಕೆ ಬಾರದ ವಿಷಯ ಹೊಳೆಯಿತು. ಮೂವರಿಗೂ ಹೇಮಂತ್ ನನ್ನು ಹೆದುರಿಸುವ ಇಚ್ಛೆ ಇರಲಿಲ್ಲ ನಾವು ಮೆಲುದನಿಯಲ್ಲಿ ಕೂಗಿದ್ದು, ಮಲ್ಲಗೆ ನಕ್ಕಿದ್ದು ಗಲಾಟೆಯಾಗಿ ಮನೆಯವರು ಎಚ್ಚರವಾಗಬಾರದೆಂದು! ಅಕಸ್ಮಾತಾಗಿ ಅವನು ಹೆದರಿ ಜೋರಾಗಿ ಕಿರುಚಿದ್ದರೆ ಮನೆಯವರಿಂದ ನಮ್ಮೆಲ್ಲರಿಗು ಶಾಸ್ತಿಯಾಗಿರುತ್ತಿತ್ತು! ಅದಲ್ಲದೆ ಗಣಪತಿ ಕೂರಿಸಿ ಕೆಟ್ಟ ಕೆಲಸ ಮಾಡುತ್ತಾರೆ ಎಂಬ ಕಳಂಕ ಕೂಡ ಬರುತ್ತಿತ್ತು! ಈ ಕ್ಷಣವೇ ಉದ್ಯಾನವನಕ್ಕೆ ಹೋಗಿ ಮಲಗೋಣ, ಬೇರೆ ಏನು ಸಾಹಸಕರ್ಯ ಬೇಡ ಎಂದು ತೀರ್ಮಾನಿಸಿದೆವು.

ಮಲಗಿದ ತಕ್ಷಣ ನಿದ್ದೆ ಹತ್ತಲಿಲ್ಲ. ಸುಮ್ಮನೆ ಮಾತನಾಡುತ್ತ ಕಾಲ ಕಳೆಯುತ್ತಿರಬೇಕಾದರೆ ಗಣಪತಿಯನ್ನು ಕೂರಿಸಿದ್ದ ಸ್ಥಳದ ಸುತ್ತಾ ಬಿಗಿದಿದ್ದ zinc sheet ಗೆ ಹೊರಗಡೆಯಿಂದ ಕಲ್ಲನ್ನು ಹೊಡೆದ ಶಬ್ದವಾಯಿತು! ಎಲ್ಲರಿಗೂ ಭೂತ ಚೇಷ್ಟೆ ಶುರುವಾಯಿತಾ ಎಂಬ ಕುತೂಹಲ! ಆದರೂ ದೆವ್ವಕ್ಕೆ ಗಣಪತಿಯ ಬಳಿ ಕಲ್ಲು ಎಸೆಯುವಷ್ಟು ಧೈರ್ಯವೇ ??? ಇಲ್ಲ ನಮ್ಮ ಹುಡುಗರೇ ಯಾರೋ ಮಾಡುತ್ತಿರಬೇಕೆಂದು ಗುಡಿಸಲಿನ ಸುತ್ತಾ ತಿರುಗಾಡಿದೆವು ಮೂರ್ನಾಲ್ಕು ಹೆಸರುಗಳನ್ನು ಕರೆದೆವು ಏನು ಉತ್ತರವಿಲ್ಲ. ಎಲ್ಲರೂ ಒಳಗೆ ಸೇರಿ ೨ ನಿಮಿಷಗಳ ಬಳಿಕ ಮತ್ತೆ ಹೊರಗೆ ಬಂದು ಮತ್ತೊಂದು ಸುತ್ತು ಓಡಾಡಿದೆವು ಯಾರ ಸುಳಿವು ಸಿಗಲಿಲ್ಲ. ಒಳಗೆ ಬಂದು ಮತ್ತೆ ಮಲಗಿದೆವು ನಿದ್ದೆ ಖಂಡಿತ ಯಾರಿಗೂ ಬರಲಿಲ್ಲ. ಎಲ್ಲರಿಗೂ ಒಂದೇ ಕುತೂಹಲ, ಭೂತ ಚೇಷ್ಟೆ ಶುರುವಾಯಿತೇ ???! ನಮ್ಮ ಕುತೂಹಲವನ್ನು ಇನ್ನಷ್ಟು ಏರಿಸಲು ಮತ್ತೆ ಕಲ್ಲು ಎಸೆದ ಶಬ್ದವಾಯಿತು! ಈ ಬಾರಿ ತಡ ಮಾಡದೆ ಎಲ್ಲರೂ ಹೊರಗೆ ಹಾರಿದೆವು, ಮತ್ತೆ ಅದೇ ಫಲವಿಲ್ಲದ ಆಟ! ಏನೊಂದರ ಸುಳಿವು ಸಿಗಲಿಲ್ಲ. ನಮಗೆ ಇದು ಭೂತ ಚೇಷ್ಟೆಯೆ ಇರಬಹುದೆಂದು ಅನ್ನಿಸತೊಡಗಿತು ಹಾಗು ಇದನ್ನು ಭೇದಿಸಲೇಬೇಕೆಂಬ ಭಾವ ಎಲ್ಲರ ಮುಖದಲ್ಲಿತ್ತು ಆದರೆ ಹೇಗೆ?, ಯಾರಿಗೂ ಏನು ತೋಚಲಿಲ್ಲ. ಭೂತ ಭೇಟಿಯ ಸಮಯ! ಆದರೆ ಯಾರಲ್ಲೂ ಮೊದಲಿದ್ದ ಭೂತ ಬೇಟೆಯ ಉತ್ಸಾಹ ಅಥವಾ ಧೈರ್ಯ ಇರಲಿಲ್ಲ. ಎಲ್ಲರೂ ಮತ್ತೊಂದು ಬಾರಿ ಶಬ್ದವಾಗಲು ಕಾಯುತ್ತಾ ಕುಳಿತೆವು. ಯಾವುದೋ ಭಯ ಕೂಡ ಆವರಿಸಿದಂತ್ತಿತ್ತು. ನಮ್ಮ ನಿರೀಕ್ಷೆಯಂತೆ ಮತ್ತೊಂದು ಬಾರಿ ಶಬ್ದವಾಯಿತು! ಮತ್ತದೇ ಪುನರಾವರ್ತನೆ ಎಷ್ಟೇ ಸುತ್ತು ಹೊಡೆದರು ಯಾರು ಕಾಣಲಿಲ್ಲ. ಈ ಬಾರಿ ಒಳಗೆ ವಾಪಸ್ಸಾದಾಗ ನಿಜವಾದ ಭಯ ಆವರಿಸಿತ್ತು ಹಾಗೂ ಎಲ್ಲರು ಏನೂ ಮಾಡಲು ತೋಚದವರಂತೆ ಏಕೆ ಹೀಗಾಗುತ್ತಿದೆ, ಏನು ಕಾರಣವಿರಬಹುದು ಎಂದೆಲ್ಲಾ ಚರ್ಚೆ ಮಾಡುತ್ತಿರಬೇಕಾದರೆ ನಮ್ಮ ಪಕ್ಕದಲ್ಲಿ "ಹ್ಹಿಹ್ಹಿಹ್ಹಿಹ್ಹಿ ಹ್ಹಹ್ಹಹ್ಹಹ್ಹಹ್ಹಾಹ್ಹಾ" ಎಂದು ನಗ್ಗುತ್ತಾ ಪ್ರಸಾದಿ ಎದ್ದು ಕುಳಿತ. ಅವನು ಒಂದು ಮೂಲೆಯಲ್ಲಿ ಮಲಗಿದ್ದರಿಂದ ಇಷ್ಟು ಹೊತ್ತು ನಮ್ಮ ಜೊತೆ ಮತ್ತೊಬ್ಬನಿರುವುದನ್ನೆ ಮರೆತ್ತಿದ್ದೆವು! "ಭೂತ ಹುಡುಕುತ್ತಾರಂತೆ ಅಷ್ಟು ಹೊತ್ತಿನಿಂದ ಒಳಗಿನಿಂದಲೇ ಕಲ್ಲು ಎಸೆಯುತ್ತಿದ್ದರೆ ಹೊರಗೆ ಭೂತ ಹುಡುಕಲು ಹೋಗುತ್ತೀರಲ್ಲ" ಎಂದು ಪ್ರಸಾದಿ ಜೋರಾಗಿ ನಗಾಡಿದ! ನಮ್ಮ ಬೆಪ್ಪು ತನಕ್ಕೆ ನಾವೂ ನಗಾಡುತ್ತಾ, ಭೂತ ಬೇಟೆಗೆ ತಯಾರಾಗುವ ರೀತಿಯಲ್ಲಿ ತಯಾರಾಗಿ, ಭೂತ ಬೇಟಿಯೂ ಆಗದೆ ಎಲ್ಲರೂ ಹೆದರಿದ್ದನ್ನು ನಮ್ಮ ರೀತಿಯಲ್ಲಿ ಮತ್ತೆ ಮತ್ತೆ ವಿವರಿಸುತ್ತಾ, ನಗುತ್ತಾ ದಿಂಬಿಗೆ ತಲೆ ಕೊಟ್ಟೆವು. ನಿದ್ದೆ ಯಾವಾಗ ಹತ್ತಿತೋ ಆ ಗಣಪತಿಗೇ ಗೊತ್ತು.

1 comment: