Tuesday, November 20, 2012

ಕುಡುಕ ಶೆಟ್ಟಿ


ಇವನ ಹೆಸರು ಬಸವಶೆಟ್ಟಿ. ಇವನು ಮಾಡುತ್ತಿದ್ದ ಕೆಲುವು ಕೆಲಸಗಳೆಂದರೆ: ಗಾರೆ ಕೆಲಸ, ಕಾವಲು ಕಾಯುವುದು. ಇದೆಲ್ಲಕ್ಕಿಂತ ಮುಖ್ಯವಾದ ಕೆಲಸವೆಂದರೆ ಕುಡಿತ! ಪ್ರತಿ ಸಂಜೆ ಪ್ಯಾಕೆಟ್ಟಿಗೆ ಖರ್ಚು ಮಾಡುವ ಕೆಲಸವನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ರಜೆ ಇದ್ದ ದಿನಗಳಲ್ಲು ನಿಷ್ಟೆಯಿಂದ ಕುಡಿಯುವ ಕೆಲಸ ಮುಂದುವರೆಯುತ್ತಿತ್ತು. ಆದರು ಇವನನ್ನು ಪ್ರಶಂಸಿಸಲೇಬೇಕು, ಕುಡಿತವನ್ನು ಎಷ್ಟೇ ಕ್ರಮಬದ್ದವಾಗಿ ಅನುಸರಿಸಿಕೊಂಡಿದ್ದರೂ ಜಾಸ್ತಿ ಹಣವನ್ನು ಪೋಲು ಮಾಡುತ್ತಿರಲಿಲ್ಲ. ದಿನಕ್ಕೆ ಎರಡು ಕ್ಷಮಿಸಿ ಎರಡೇ ಪಾಕೀಟು! ಅದು ಆ ಪಾಕೀಟಿನ ಮಹಿಮೆಯೋ ಅಥವಾ ಅವನ ಸಾಮರ್ಥ್ಯ ಕಡಿಮೆಯೋ ತಿಳಿಯದು, ಅವನು ಮಲಗುವ ತನಕ ಏರಿದ ಅಮಲಿನ ನಶೆಯುಕ್ತ ಕೊರಗು, ಆಟಗಳು, ಬೈಗುಳ ನಿಲ್ಲುತ್ತಲೆ ಇರಲಿಲ್ಲ. ತಾನು ನೆನಪಿಸಿಕೊಂಡವರಿಗೆಲ್ಲಾ ಹಿತವಚನಗಳನ್ನು ಒದರುತ್ತಿದ್ದ ಅಥವಾ ಸಿಕ್ಕಾಪಟ್ಟೆ ಬಯ್ಯುತ್ತಿದ್ದ. ಕೆಲವೊಮ್ಮೆ ರಾಜಕಾರಣಿಗಳಿಗೆ, ಕೆಲವೊಮ್ಮೆ ಚಿತ್ರನಟರಿಗೆ! ಬಹುಶಃ ಯಾರು ನೆನಪಿಗೆ ಬರದಿದ್ದರೆ ತನ್ನ ಮಡದಿಗೆ ಬಯ್ಯುತ್ತಿದ್ದ!

ವಾರಾಂತ್ಯದಲ್ಲೊಮ್ಮೆ ಮೈಸೂರಿನಲ್ಲಿದ್ದೆ, ಕೆಲಸ ಸಿಕ್ಕಿ ಸಂಬಳ ಬಂದಿದ್ದ ಸಮಯ. ಆ ಸಮಯದಲ್ಲೆ ಶೆಟ್ಟಿ ನಮ್ಮ ಮನೆಗೆ ಬಂದು ನನ್ನನ್ನು ಮಾತನಾಡಿಸಿ ಸಂಕೋಚವೇ ಇಲ್ಲದೆ ಬಹಳ ನೇರವಾಗೆ "ನಿಮಗೆ ಕೆಲಸ ಸಿಕ್ಕಿ ಸಂಬಳ ಬಂದಿದೆ, ನನಗೆ ಒಂದೆರಡು ಪಾಕೀಟಿಗೆ ದುಡ್ಡು ಕೊಡಿ ನಿಮಗೆ ಒಳ್ಳೆಯದಾಗಲಿ" ಎಂದು ಅಪೇಕ್ಷಿಸಿದ್ದ ಹಾಗು ಹಾರೈಸಿದ್ದ!. ನಾನು ದುಡ್ಡು ಕೊಡದಿದ್ದರೆ ಇವನು ಕುಡಿಯುವುದಂತು ಬಿಡುವುದಿಲ್ಲ, ಹೇಗಾದರು ಹಾಳಾಗಲಿ ಎಂದು ೨೦ರೂ ಕೊಟ್ಟೆ. ನನಗೆ ಮೊದಲ ಸಂಬಳ ಬಂದಾಗ ಆಗಿದ್ದಕ್ಕಿಂತ ಹೆಚ್ಚು ಖುಷಿಯನ್ನು ಅವನಲ್ಲಿ ನೋಡಿದೆ. ೨೦ರೂ ಗಳು ಅವನಲ್ಲಿ ಅಷ್ಟು ಖುಷಿ ಮೂಡಿಸಿತ್ತು! ಪಾಕೀಟಿನ ಮಹಿಮೆಯದು!

ಶೆಟ್ಟಿ ರಾತ್ರಿ ಹೊತ್ತಿನಲ್ಲಿ ನಮ್ಮ ಬಡಾವಣೆಯಲ್ಲಿ ಕಟ್ಟುತ್ತಿದ್ದ ಯಾವುದಾದರೊಂದು ಮನೆಯ ಕಾವಲು ಕಾಯುತ್ತಿದ್ದ. ಮನೆ ಕಟ್ಟುವವರು ಅದರ ಸನಿಹದಲ್ಲಿ ಒಂದು ಪುಟ್ಟ ತಾತ್ಕಾಲಿಕ ಕೋಣೆಯನ್ನು ಕಟ್ಟಿ ಆ ಕೋಣೆಯಲ್ಲಿ ಮನೆ ಕಟ್ಟಲು ಬೇಕಾಗುವ ಬಹಳಷ್ಟು ಸಾಮಾನುಗಳನ್ನು ಇಡುತ್ತಿದ್ದರು. ಬಹಳ ಪುಟ್ಟ ಕೋಣೆಯದು. ಶೆಟ್ಟಿ ಆ ಪುಟ್ಟ ಕೋಣೆಯಲ್ಲೆ ಮಲಗುತ್ತಿದ್ದ. ಪ್ರತಿ ದಿನ ತಪ್ಪದೆಯೆ ಕುಡಿದೇ ಮಲಗುತ್ತಿದ್ದ. ಆ ಸ್ಥಳಗಳಲ್ಲಿ ಕಳ್ಳತನವಾಗದೆ ಇರುತ್ತಿದ್ದುದು ಅವನ ಅದೃಷ್ಟವೇ ಸರಿ. ಅದು ಬೇಸಿಗೆ ಕಾಲ ನಮ್ಮ ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಮನೆಯೊಂದನ್ನು ಕಟ್ಟಲು ಶುರು ಮಾಡಿದ್ದರು. ಶೆಟ್ಟಿ ಒಂದು ಸಂಜೆ ಬಹಳ ಬೇಗನೆ ಕುಡಿದು ಕಟ್ಟುತ್ತಿದ್ದ ಮನೆಯ ಪಕ್ಕದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಕೋಣೆಯಲ್ಲಿ, ಸೆಕೆ ಬಹಳ ಇದ್ದುದರಿಂದ ಬಾಗಿಲನ್ನು ತೆರೆದು ಮಂಡಿಯ ಮೇಲಿನ ದೇಹವನ್ನು ಹೊಸಲಿನೊಳಗೆ ಬೀಳಿಸಿ, ಕೆಳಗಿನ ದೇಹವನ್ನು ಹೊಸಲಿನಿಂದಾಚೆ ಇರಿಸಿ ವಿಚಿತ್ರ ಭಂಗಿಯಲ್ಲಿ ಮಲಗಿದ್ದ! ಸಮಯ ಸುಮಾರು ೭:೩೦, ಇದ್ದಕ್ಕಿದ್ದ ಹಾಗೆ ಜೋರಾಗಿ ಕಿರುಚುತ್ತಾ ಆ ಕೋಣೆಯ ಬಾಗಿಲನ್ನು ಎಳೆದು, ಹೊರಗಿನಿಂದ ಚಿಲಕ ಹಾಕಿ ಅಮಲಿನ ನಲಿವಿನಿಂದಲೆ ಅಕ್ಕ ಪಕ್ಕದ ಮನೆಯ ಬಾಗಿಲನ್ನೆಲ್ಲಾ ಬಡಿದು "ಕಳ್ಳ ಕಳ್ಳ ಕೂಡಿ ಹಾಕಿದ್ದೇನೆ ಕಳ್ಳ ಕಳ್ಳ, ಪೋಲೀಸರಿಗೆ ಫೋನು ಮಾಡಿ" ಎಂದು ಕಿರುಚಾಡಿದ. ನೋಡು ನೋಡುತ್ತಿದ್ದಂತೆಯೆ ಬೀದಿಯವರೆಲ್ಲಾ ಸೇರಿಕೊಂಡರು! ವಿಚಾರಿಸಲು, ಶೆಟ್ಟಿಯು ನಶೆಯ ನೃತ್ಯ ಮಾಡುತ್ತಲೆ ಹೇಳಿದ "ಕಳ್ಳನ್ನನ್ನು ಒಳಗೆ ಕೂಡಿ ಹಾಕಿದ್ದೇನೆ, ನನ್ನ ಕಾಲನ್ನು ತುಳಿದು ಒಳಗೆ ಹಾರಿದ! ಅವನ ಕಾಲನ್ನು ಇವತ್ತು ಕತ್ತರಿಸುತ್ತೇನೆ ಎಳೆಯಿರಿ ಅವನನ್ನು ಹೊರಕ್ಕೆ ಹಾssss". ಬೀದಿಯಲ್ಲಿ ಸೇರಿದ್ದವರೆಲ್ಲಾ "ಕಳ್ಳನ ಹತ್ತಿರ ಚಾಕು ಇರಬಹುದು, ದೊಣ್ಣೆ ಇರಬಹುದು ಅಥವಾ ಇನ್ಯಾವುದಾದರು ಆಯುಧ ಇರಬಹುದು ಒಮ್ಮೆಗೆ ನುಗ್ಗಬೇಡಿ, ತಾಳ್ಮೆ. ಹೊರಗಿನಿಂದಲೇ ಮಾತನಾಡಿಸಿ" ಹೀಗೆ ಅವರವರ ಅಂಜಿಕೆ, ಕಾಳಜಿ, ಮುಂಜಾಗ್ರತೆಯ ಉಪಾಯಗಳನ್ನು ಹಂಚಿಕೊಂಡರು ಹಾಗು ಕಳ್ಳನನ್ನು ಮೊದಲು ಹೊರಗಿನಿಂದ ಮಾತನಾಡಿಸುವುದು ಸರಿಯೆಂದು ತೀರ್ಮಾನಿಸಿದರು!. ಗುಂಪಿನಲ್ಲಿದ್ದ ಪ್ರಮುಖರು ಕಟ್ಟುವ ಮನೆಯ ಸುತ್ತ ಬಿದ್ದಿದ್ದ ಪುಟ್ಟ ಬೊಂಬುಗಳನ್ನು ಹಿಡಿದು, ಕೋಣೆಯ ಪುಟ್ಟ ಕಿಟಕಿಯ ಬಳಿ ಹೋಗಿ "ಯಾರೋ ಒಳಗಿರಿವುದು ಮರ್ಯಾದೆಯಾಗಿ ಹೊರಗೆ ಬಂದರೆ ನಿನಗೂ ಒಳಿತು ನಮಗೂ ಒಳಿತು, ಹೆದರಬೇಡ. ನೀನಾಗೆ ಬಂದರೆ ನಾವು ಏನು ಮಾಡುವುದಿಲ್ಲ ಆದರೆ ನಾವೇ ಒಳಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡಿವುದಿಲ್ಲಾ, ನಿನ್ನನ್ನು ಕಂಬಕ್ಕೆ ಕಟ್ಟುತ್ತೇವೆ, ಹೊಡೆಯುತ್ತೇವೆ, ಪೋಲೀಸರಿಗೆ ಹಿಡಿದುಕೊಡುತ್ತೇವೆ!" ಹೀಗೆ ನಾನಾ ರೀತಿಯಲ್ಲಿ ಉದ್ಗರಿಸಿದರು. ಒಳಗಡೆಯಿಂದ ಒಂದು ಸೊಳ್ಳೆಯ ಶಬ್ದ ಕೂಡ ಕೇಳಲಿಲ್ಲ! ತಮಾಷೆ ಹೀಗೆ ಸುಮಾರು ೩೦ ನಿಮಿಷ ಮುಂದುವರಿಯಿತು. ಅಷ್ಟರಲ್ಲಿ ’ಗರುಡ’ ಜೀಪು ನಮ್ಮ ಬೀದಿಗೆ ಬಂತು. ಯಾರೋ ನಮ್ಮ ಬೀದಿಯವರೆ ದೂರವಾಣಿ ಕರೆ ಮಾಡಿದ್ದರು. ಈಗ ತೋರಿಕೆಯ ಸರದಿ ನಮ್ಮ ಬಡಾವಣೆಯ ಆರಕ್ಷಕರು ಹಾಗು ಶೆಟ್ಟಿಯದು! ಶೆಟ್ಟಿ ಹುಮ್ಮಸ್ಸಿನಲ್ಲಿದ್ದ. ಬಹುಶಃ ಕಳ್ಳ ಸಿಕ್ಕಿದ ಮೇಲೆ ತನಗೆ ಬಹುಮಾನವಾಗಿ ಪಾಕೀಟಿಗಾಗುವಷ್ಟು ಹಣ ಸಿಗಬಹುದು ಎಂದು ಎಣಿಸಿದ್ದನೋ ಏನೋ! "ಕಳ್ಳನ್ನನ್ನು ನಾನೆ ನೋಡಿದ್ದು, ನಾನೆ ಅವನನ್ನು ಒಳಗೆ ಕೂಡಿ ಹಾಕಿದ್ದೇನೆ" ಎಂದ. ನಿರೀಕ್ಷಕ ಹಾಗು ಪೇದೆಯೊಬ್ಬ ಕೋಣೆಯ ಬಳಿ ಇದ್ದವರನ್ನೆಲ್ಲಾ ದೂರ ಸರಿಸಿ, ಒಂದು ಬೊಂಬನ್ನು ಹಿಡಿದು (ಪೇದೆಗೆ ತನ್ನ ಲಾಠಿಯ ಮೇಲೆ ನಂಬಿಕೆ ಇರಲಿಲ್ಲವೇನೋ!)  ಕಿಟಕಿಯ ಬಳಿ ಹೋಗಿ ಬಡಾವಣೆಯ ಪ್ರಮುಖರೆಲ್ಲಾ ಉದ್ಗರಿಸಿದ ರೀತಿಯಲ್ಲೆ ಉದ್ಗರಿಸಿದರು! ಮತ್ತೆ ಕೋಣೆಯೊಳಗೆ ನಿಶ್ಯಬ್ದ. ಅವರಿಬ್ಬರಿಗೂ ಶೆಟ್ಟಿಯ ಚಾಳಿ ತಿಳಿದಿತ್ತು. "ಕುಡುಕ ನಶೆಯಲ್ಲಿ ಏನನ್ನು ಸ್ಪರ್ಷಿಸಿದನೋ, ಅವನ ಕಾಲ ಮೇಲೆ ಹಾವು ಹರಿಯಿತೋ, ಇಲ್ಲ ಕನಸು ಕಂಡನೋ" ಎಂದು ಗೊಣಗಿಕೊಂಡು ಬಾಗಿಲನ್ನು ತೆರೆದು ಒಳಗೆ ನೋಡಿದರು. ಯಾರೂ ಇಲ್ಲ! ಹತ್ತಿದ ಕೋಪವನ್ನೆಲ್ಲಾ ಪೋಲೀಸರು, ಪೋಲೀಸ್ ಬೈಗುಳಕ್ಕೆ ಪರಿವರ್ತಿಸಿ ಶೆಟ್ಟಿಯ ಮೇಲೆ ಹರಿಹಾಯ್ದರು. ಆದರೆ ಶೆಟ್ಟಿಯ ಅಚಲ ಆತ್ಮವಿಶ್ವಾಸಕ್ಕೆ ಇದಾವುದು ಧಕ್ಕೆ ಮಾಡಲಿಲ್ಲ. ಅವನು ಬಹಳ ತಣ್ಣಗೆ "ಸ್ವಾಮಿ ಒಳಗೆ ಕಳ್ಳ ಹೋಗಿದ್ದೇನೋ ನಿಜ, ಹೋಗಬೇಕಾದರೆ ನನ್ನ ಕಾಲನ್ನು ತುಳಿದಿದ್ದು ನಿಜ, ಈಗ ಒಳಗೆ ಯಾರು ಇಲ್ಲ ಅಂದರೆ ಅದು ದೆವ್ವ" ಎಂದ!

ಮೊದಲೇ ನಮ್ಮ ಬೀದಿಯ ಮಹಿಳೆಯರು ಇಂಥಾ ವಿಷಯಗಳಿಗೆ ಬಹಳ ಹೆದರುತ್ತಿದ್ದರು. ಆ ಸಂಜೆಯಿಂದ ಸುಮಾರು ೩-೪ ವಾರಗಳ ತನಕ ಕತ್ತಲೆಯಾದರೆ ಒಬ್ಬೊಂಟಿಯಾಗಿ ಅವರು ನಮ್ಮ ಬೀದಿಯಲ್ಲಿ ನಡೆಯುತ್ತಲೇ ಇರಲಿಲ್ಲ! ಶೆಟ್ಟಿ ಈ ಘಟನೆಯ ನಂತರ ಮತ್ತೆಂದು ಆ ಕೋಣೆಯಲ್ಲಿ ಮಲಗಲೂ ಇಲ್ಲ!

Monday, July 23, 2012

Blacky ಮತ್ತು ಕಟ್ ಹಾವು


ಇಂಜಿನಿಯರಿಂಗ್‌ನ study holidays ಸಮಯ. semester ಶುರು ಆದಾಗಿನಿಂದ ಓದಿಲ್ಲದಿರುವುದನ್ನೆಲ್ಲ ಓದುವ ಸಮಯ. ಮೊದಲನೆಯ semester ನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಮೊದಲ internals ನಿಂದಲೆ ಓದಲು ಶುರು ಮಾಡಿರುತ್ತಾರೆ. ಬಹಳಷ್ಟು ಮಂದಿ ಮೊದಲನೆ semester ನಲ್ಲಿ ತಮ್ಮ ಸರಾಸರಿಯನ್ನು ಹೆಚ್ಚಿಸಿಕೊಳ್ಳಲು ಮೂರನೆ internals ಬರೆದಿರುತ್ತಾರೆ. ೨೧-೨೨ ಇರುವವರು ೨೩-೨೪ ಮಾಡಿಕೊಳ್ಳಲು, ೨೫ ಇರುವವರು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಮೂರನೆಯದರಲ್ಲು ೨೫ ತೆಗೆಯಲು ಬರೆದಿರುತ್ತಾರೆ! ಅವರಲ್ಲಿ ಖಡಾಖಂಡಿತವಾಗಿಯು ಬಹಳಷ್ಟು ಮಂದಿಗೆ ಪ್ರತಿ semester ಗಳ ಬಳಿಕ ಒದುವ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ, ಉದಾಹರಣೆಗೆ ಎರಡನೆ semester ನಲ್ಲಿ ಅದು ೧೮-೧೯ ರಿಂದ ೨೦-೨೧ ಕ್ಕೆ ಏರಿಸಿಕೊಳ್ಳಲು ಬರೆಯಬಹುದು! ಹೀಗೆ semester ಕಳೆಯುತ್ತಾ ಮೂರನೆ internals ನಲ್ಲಿ ತಮ್ಮ ಸರಾಸರಿಯನ್ನು ಪ್ರಶಸ್ತವಾದ ಕನಿಷ್ಟ ಅಂಕೆ ೧೫ಕ್ಕೆ ಏರಿಸಲು ಬರೆಯಬಹುದು. ಆದರೆ ಕೆಲುವು ಕಾಲೇಜುಗಳಲ್ಲಿ ನನ್ನತಃ ವಿದ್ಯಾರ್ಥಿಗಳಿಗೆ ಸರಾಸರಿಯನ್ನು ೧೫ಕ್ಕೆ ಏರಿಸಲು ನಾಲ್ಕನೆ internals ಕೂಡ ಕೊಡುತ್ತಿದ್ದರು! ಅದರಲ್ಲು ಬಹಳಷ್ಟು ಮಂದಿ ನಾಲ್ಕನೆ internals ನಲ್ಲೂ ೧೫ ಮುಟ್ಟಲಾಗದೆ externals ನಲ್ಲಿ ನೋಡಿಕೊಳ್ಳೋಣ ಎಂದು ಸುಮ್ಮನಾಗುತ್ತಿದ್ದರು! ಇಂಥಾ ಸಂದರ್ಭಗಳನ್ನು ಎದುರಿಸಲು ನಮಗಿದ್ದ ದಾರಿಯೆ study holidays! ೩ ವಾರಗಳ ಕಾಲ ರಜೆ ಇರುತ್ತಿದ್ದ ಸಮಯದಲ್ಲಿ ಒಂದೆ ಸಮನೆ ಓದಿ, ಎಲ್ಲವನ್ನು ತಲೆಗೆ ತುರುಕಿ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಪಡೆಯುವುದೇ ಎಲ್ಲರ ಗುರಿ. ಈ ಸನ್ನಿವೇಶದಲ್ಲಿ ಒಳ್ಳೆಯ ಅಂಕ ಎಂದರೆ ಒಬ್ಬೊಬ್ಬರಿಗು ಬೇರೆಯದೆ ಆಗಿರುತ್ತದೆ, ೯೫-೯೦-೮೦-೭೦-೬೦ ಇದು ಬೆರಳೆಣಿಕೆಯ ಪಂಕ್ತಿ! ಬಹಳಷ್ಟು ಮಂದಿಗೆ Externalsನಲ್ಲಿ ಪ್ರಶಸ್ತವಾದ ಅಂಕೆಯೆಂದರೆ ೩೫!

ನಾನು ಈ ಮೊದಲೆ ’ಫಿನಾಯಿಲ್’ ನಲ್ಲಿ ಹೇಳಿದ್ದ ಹಾಗೆ study holidays ನಲ್ಲಿ ಓದುವುದಕ್ಕೆ ನಮ್ಮದೆ ಆದ ಪರಿಮಿತಿಯನ್ನು ನಮಗೆ ಸೃಷ್ಟಿಸಿಕೊಂಡಿರುತ್ತೇವೆ. ನಿಜವಾಗಿಯೂ ನಮ್ಮ ದೇಹಕ್ಕೆ, ತಲೆಯ ಸ್ಥಿರತೆಗೆ ಯಾವುದೇ ಹಾನಿಯಾಗುವುದಿಲ್ಲವಾದರು ಆ ಪರಿಮಿತಿಯನ್ನು ನಾವು ದಾಟುವುದೇ ಇಲ್ಲ. ಅದಕ್ಕೆ ಬಹಳಷ್ಟು ಮಂದಿ ಕೊಡುವ ಕಾರಣ "Mind refreshment"! ಈ mind refreshment ಗು ಸಹ ಅವರವರಿಗೆ ಅವರವರ ದಾರಿ/ದಾರಿಗಳು ಇರುತ್ತವೆ. ನನಗೆ ಇದ್ದ ದಾರಿಗಳೆಂದರೆ ನನ್ನ ಗಣಕಯಂತ್ರದಲ್ಲಿ ವಿಧವಿಧವಾದ ಆಟಗಳನ್ನು ಆಡುವುದು, ಯಾವುದಾದರು ಸಿನಿಮಾ ನೋಡುವುದು ಅಥವಾ ಇವೆರಡಕ್ಕಿಂತ ಆದ್ಯತೆ ಪಡೆದ "ಹರಟೆ"! ಈ ಹರಟೆಯಲ್ಲಿ ಸೇರುತ್ತಿದ್ದುದು ನಾನು ಮತ್ತು ನನ್ನ ಆಪ್ತಮಿತ್ರರಾದ ವಿಜಯ್, ಹೇಮಂತ್ ಹಾಗು ಸಂತೋಷ್. ಸೋಜಿಗವೆಂದರೆ ಯಾರೂ ಓದಿನ ಬಗ್ಗೆ ಜಾಸ್ತಿ ಹರಟುತ್ತಿರಲಿಲ್ಲ! ಶಾಸ್ತ್ರಕ್ರಮವೆಂಬಂತೆ, ಸೇರಿದಾಗ ಸುಮ್ಮನೆ "ಎಷ್ಟು ಮುಗಿಸಿದೆ", "ಎಷ್ಟು ಪ್ರಶ್ನೆಗಳಿಗೆ ತಯಾರಾಗುತ್ತಿದ್ದೀಯ" ಎಂದು ಕೇಳುತ್ತಿದ್ದೆವು. ತದ ನಂತರ ನಮ್ಮದೇ ಲೋಕದಲ್ಲಿ ಮುಳುಗುತ್ತಿದ್ದೆವು. ಕಡಿಮೆ ಎಂದರೆ ೩-೪ ಗಂಟೆಗಳ ಕಾಲ ಹರಟೆ ಹೊಡೆಯುತ್ತಿದ್ದೆವು. ಹರಟೆ ಹೊಡೆಯಲು ಸೇರುತ್ತಿದ್ದ ಸ್ಥಳಗಳೆಂದರೆ ನಮ್ಮ ಬಡಾವಣೆಯ ಹೊರಗಿದ್ದ ಆಲದ ಮರ, ನಮ್ಮ ಬಡಾವಣೆಯ water tank (ನನಗೆ ಈಗಲು 3-idiots ಸಿನಿಮಾ ಮೇಲೆ ಅಸೂಯೆ! ನಮ್ಮ ಈ ಕಾಲಹರಣ ಪದ್ಧತಿಯನ್ನು ಭಟ್ಟಿ ಇಳಿಸಿದಕ್ಕೆ!) ಹಾಗು ನಮ್ಮ ಬಡಾವಣೆಯ ಉದ್ಯಾನವನದ ಧ್ವಜಸ್ತಂಭ. ಕೆಲುವು ದಿನ ಮನೆಯಲ್ಲಿ ಯಾರು ಇಲ್ಲದಿದ್ದರೆ ನಮ್ಮ ಮನೆಗಳೆ ಹರಟೆಯ ತಾಣವಾಗುತ್ತಿತ್ತು. ಹೀಗೆ ಒಂದು ದಿನ ವಿಜಯ್ ಮನೆಯ ಮುಂದಿನ ಪಡಸಾಲೆಯಲ್ಲಿ ಹರಟೆಗೆ ಕುಳಿತ್ತಿದ್ದೆವು. ವಿಜಯ್‌ಗೆ ಮನೆಯಲ್ಲಿರಬೇಕಾದರೆ ಪಂಚೆ - ಬನಿಯನ್ ನಲ್ಲಿರುವುದು ಅಭ್ಯಾಸ. ಇದನ್ನು ಇಲ್ಲೇಕೆ ಪ್ರಸ್ತಾಪಿಸಿದ್ದೇನೆ ಎಂದು ಸ್ವಲ್ಪದರಲ್ಲೆ ತಿಳಿಯುತ್ತದೆ. ವಿಜಯ್ ಮನೆಯಲ್ಲಿ ನಾವು ಹರಟೆಗೆ ಕುಳಿತರೆ ನಮ್ಮ ಜೊತೆ ಅವರ ನಾಯಿ blacky ಕೂಡ ಕೂರುತ್ತಿತ್ತು! ನಾವಾಡುವ ಮಾತುಗಳು ಅದಕ್ಕೆ ಎಷ್ಟು ಅರ್ಥವಾಗುತ್ತಿತ್ತೊ  ಏನೋ ನಮಗೆ ತಿಳಿಯದು. ಆದರೆ ಬಹಳ ಖುಷಿಯಿಂದಲೆ ನಮ್ಮನ್ನು ಆಲಿಸುತ್ತಿತ್ತು. ಸಧ್ಯ ನಾಯಿಗಳಿಗೆ ದೂರುವ ಪ್ರತಿಭೆ ಇಲ್ಲ. ಇದ್ದಿದ್ದರೆ ನಮಗೆ ಎಷ್ಟು ಗ್ರಹಚಾರ ಕಾದಿರುತ್ತಿತ್ತೋ!

ವಿಜಯ್ ಮನೆಮುಂದಿನ ಪಡಸಾಲೆಯಿಂದ gate ತನಕ ಸುಮಾರು ೧೫ ಅಡಿ, ಅಷ್ಟುದ್ದಕ್ಕು ಸುಮಾರು ೪-೫ ಅಡಿ ಅಗಲಕ್ಕೆ ಗಾರೆ ನೆಲ. ಗಾರೆ ನೆಲದ ಪಕ್ಕ ಹೂದೋಟ. ನಾವೆಲ್ಲಾ ಹೀಗೆ ಮಾತನಾಡುತ್ತ ನಮ್ಮ ಲೋಕದಲ್ಲಿ ನಾವು ಮುಳುಗಿದ್ದೆವು. Gate ತುದಿಯಿಂದ ನಮ್ಮ ಹತ್ತಿರಕ್ಕೆ ಒಂದು ಹಾವಿನ ಮರಿ ತೆವಳಿ ಬಂದಿತ್ತು! ನಾವು ನಮ್ಮ ಮಾತಿನಲ್ಲಿ ಎಷ್ಟು ಮುಳುಗಿದ್ದೆವೆಂದರೆ ಈ ಹಾವು ನಮ್ಮ ಪಕ್ಕ ಬರುವ ತನಕ ಒಬ್ಬರಿಗು ಅರಿವಾಗಿರಲಿಲ್ಲ. ನಮ್ಮನ್ನು ಬಿಡಿ ಮನುಷ್ಯರದ್ದು ಇದೇ ಗೋಳು, ಆದರೆ ನಮ್ಮ ಜೊತೆ ಕುಳಿತಿದ್ದ blacky ಗಾದರು ಗೊತ್ತಾಗಬಾರದೆ! ಅದೂ ಕೂಡ ನಮ್ಮ ಮಾತಿನಲ್ಲಿ ನಮ್ಮ ಜೊತೆ ಆ ಮಟ್ಟಿಗೆ ಮುಳುಗಿತ್ತು! ಹಾವನ್ನು ಮೊದಲು ನೋಡಿದವನು ಹೇಮಂತ್. ಅವನಿಗೆ ಹಾವು ಎಂದು ಕಿರುಚಲೂ ಆಗಿರಲಿಲ್ಲ! ಹಾವಿನ ಕಡೆ ಕೈ ತೋರಿಸಿ "ವಿಜಯ್ ವಿಜಯ್" ಎಂದು ಕಿರುಚುತ್ತ ನೆಲದ ಮೇಲೆ ತರಾವರಿ ನೃತ್ಯ ಮಾಡಿದ! ಎಲ್ಲರು ಹಾವಿನ ಕಡೆ ನೋಡಿ, ಹಾವು ನಮ್ಮೆಡೆಗೆ ಬರುತ್ತಿದೆ ಎಂದು ಹೊಳೆದು ಅದಕ್ಕೆ ಪ್ರತಿಕ್ರಿಯಿಸಲು ಸಾಮಾನ್ಯ ಸಮಯಕ್ಕಿಂತ ಸ್ವಲ್ಪ ಜಾಸ್ತಿಯೇ ಹಿಡಿಯಿತು! ಹರಟೆಯಲ್ಲಿ ಮುಳುಗಿದ್ದ ಪರಿ ಇದು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹಾರಿದೆವು. ನಾನು ಮತ್ತು ಸಂತೋಷ್ compund ಹತ್ತಿದೆವು, ಹೇಮಂತ್ ನಮ್ಮ ವಿರುದ್ದ ಹಾರಿದ, ವಿಜಯ್ ಪಡಸಾಲೆಯ ಮೆಟ್ಟಿಲೇರಿದ. ಈ ಸಮಯದಲ್ಲಿ blacky ತನ್ನ ಪೌರುಷ ತೋರಿಸಲು ಶುರು ಮಾಡಿತ್ತು! ಹಾವಿನ ಮೇಲೆ ಎರಗಿ ಅದನ್ನು ಮೊದಲು ತನ್ನ ಮುಂಗಾಲಿನಲ್ಲಿ ಕೆಣಕಿ, ಎಳೆದು, ಅದು ಪ್ರತಿರೋಧ ಒಡ್ಡಿದಾಗ ಬಾಯಲ್ಲಿ ಕಚ್ಚಿ ಮೇಲೆತ್ತಿ ಲೋಲಕದಂತೆ ಅಲ್ಲಾಡಿಸಿ ಎಸೆಯಿತು! ಹಾವಿನ ಮರಿ ಎತ್ತ ಹೋಯಿತೊ ತಿಳಿಯದು, blacky ಮನೆಯ ಸುತ್ತಾ ಮೂಸಿ ಮೂಸಿ ಹುಡುಕುತ್ತಿತ್ತು. ನಾವು ಕಾತುರದಿಂದ ಎಲ್ಲಾ ಕಡೆ ನೋಡುತ್ತಿರಲು ಹೂದೋಟದ ಹುಲ್ಲಿನ ಜೊಂಪೆಯಿಂದ ಹಾವು ಹೊರಗೆ ಬಂತು. ಹೇಮಂತ್ ಮತ್ತೆ "ಅಲ್ಲಿ ಅಲ್ಲಿ" ಎಂದು ಕೈತೋರಿಸುತ್ತಾ ಕಿರುಚಿದ. Blacky ಮೊದಲಿಗಿಂತ ಜಾಸ್ತಿ ರೊಚ್ಚಿಗೆದ್ದು ಅದರ ಮೇಲೆ ಎರಗಿತು! ಈ ನಾಯಿಗಳೆ ಹೀಗೆ. ಅವುಗಳ ಒಡೆಯ ಅಥವಾ ಹಿತೈಷಿಗಳು ಜೊತೆಯಲ್ಲಿದ್ದರೆ ಅದೆಷ್ಟು ಧೈರ್ಯ ಬರುತ್ತದೊ ಅವಕ್ಕೆ. ಈ ಸನ್ನಿವೇಶದಲ್ಲಿ ಎಲ್ಲರೂ ಇದ್ದರು! ಆದರೆ ಇಂಥಃ ಆಕ್ರಮಣಶೀಲ ಸಮಯದಲ್ಲಿ ಅವಕ್ಕೆ ಏನು ನಡೆಯುತ್ತಿರುತ್ತದೊ ಗೊತ್ತಾಗದು. ಎರಡನೆ ಬಾರಿ ಎರಗಿ ಮತ್ತೆ ತನ್ನ ಲೋಲಕ ಪ್ರತಿಭೆ ಪ್ರದರ್ಶಿಸುತ್ತಿರಬೇಕಾದರೆ ಹಾವು ಅದರ ಬಾಯಿಂದ ಉಡಾವಣೆಯಾಗಿ ವಿಜಯ್ ಬೆನ್ನಿಗೆ ಬಡಿದು ಕೆಳಕ್ಕೆ ನೆಲೆಗೊಂಡಿತು! ವಿಜಯ್‌ಗೆ ಆ ಸಮಯದಲ್ಲಿ ಹೇಗೆ ಭಾಸವಾಯಿತೋ ಅವನೇ ಬಲ್ಲ. ಅವನು ಹಾವು ಮನೆಯೊಳಗೆ ನುಗ್ಗದೆ ಇರಲಿ ಎಂದು ಮುಂಬಾಗಿಲು ಮುಚ್ಚಿದ. Blackyಗೆ ಹಾವು ಬಿದ್ದಿರುವ ಜಾಗ ತಿಳಿಯದೆ ಸುತ್ತಲೂ ಗುರ್ರೆನ್ನುತ್ತಾ ಹುಡುಕುತ್ತಿತ್ತು. ನಾನು ನಾಯಿಯನ್ನು ಮೊದಲು ಯಾರಾದರು ಹಿಡಿದುಕೊಳ್ಳಿ ಎಂದು ಕಿರುಚಿದೆ. Blackyಯನ್ನು ಹೇಮಂತ್ ಹಿಡಿದುಕೊಂಡ. ಹಾವು ಬಿದ್ದಾಕ್ಷಣ ತುಸುವು ಅಲ್ಲಾಡದೆ ಸತ್ತಂತೆ ನಟಿಸಲು ಶುರು ಮಾಡಿತ್ತು. ನಾನು ವಿಜಯ್‌ಗೆ ಕೋಲು ಕೊಡಲು ಹೇಳಿದೆ. ವಿಜಯ್‌ ಮನೆಯೊಳಗೆ ಹೋಗಿ ಹುಡುಕಿ ಕೋಲು ಸಿಗದೆ ಪೊರಕೆ ಹಿಡಿದು ಬಾಗಿಲ ಬಳಿ ಬಂದು ನಿಂತನು. ಅವನಿಗೆ ಹಾವು ಎಲ್ಲಿದೆಯೋ ತಿಳಿಯದೆ ಬಾಗಿಲಿನಿಂದ ಹೊರಕ್ಕೆ ಬರಲೇ ಇಲ್ಲ. ಕೆಳಗೆ ಹಾವು, compoundನ ಮೇಲೆ ನಾನು ಹಾಗು ಸಂತೋಷ್. ಸಂತೋಷ್ ಇಳಿಯುವ ಹಾಗೆ ಕಾಣಿಸಲಿಲ್ಲ, ನಿಜವಾಗಿಯೂ ಭಯವಾಗಿತ್ತು. ಕೊನೆಗೆ ಧೈರ್ಯ ಮಾಡಿ ಇಳಿದು ಪೊರಕೆ ಪಡೆದುಕೊಂಡು ಹಾವನ್ನು ತಳ್ಳಲು ಶುರು ಮಾಡಿದೆ, ಹಾವು ಒಂದು ಚೂರು ಅಲ್ಲಾಡುತ್ತಿರಲಿಲ್ಲ. ಉಸಿರನ್ನು ಬಿಗಿ ಹಿಡಿದು ನಟಿಸುತ್ತಿರುವ ಹಾಗೆ ಅನಿಸುತ್ತಿತ್ತು. ಅದನ್ನು gateನಿಂದ ಹೊರಕ್ಕೆ ತಳ್ಳಿ ಹುಲ್ಲಿನ ಬಳಿ ಬಿಟ್ಟೆ. Blacky ಇನ್ನೂ ತಿಂದೇಹಾಕುವ ಹಾಗೆ ಗುರುಗುಟ್ಟುತ್ತಲೇ ಇತ್ತು. ನನಗೆ ಹಾವು ಖಂಡಿತ ನಟಿಸುತ್ತಿದೆ ಎನಿಸಿತ್ತು, ಅದರ ದೇಹವನ್ನು ಪೂರ್ತಿ ಗಮನಿಸಿದ್ದೆ ಎಲ್ಲು ಗಾಯವಾಗಿರಲಿಲ್ಲ. ಹುಲ್ಲಿನ ಮೇಲೆ ಬಿಟ್ಟ ಸ್ವಲ್ಪ ಸಮಯದ ನಂತರ ವೇಗವಾಗೆ ರಸ್ತೆ ದಾಟಿ ಇನ್ನೊಂದು ಬದಿ ಸೇರಿತು. ಎಲ್ಲರಿಗು ಸಾವಿನ ಸುಳಿಯಿಂದ ಹೊರಬಂದ ಹಾಗಾಗಿತ್ತು. ಮರಿ ಹಾವಿನ ವಿಷ, ಅದರಲ್ಲು ಕಟ್ ಹಾವಿನ ಮರಿ ನಿಜವಾಗಿಯೂ ಅಪಾಯವೆ. ಎಲ್ಲರು ಒಬ್ಬೊಬ್ಬರು ಹೆದರಿದ್ದ ರೀತಿಯನ್ನು ಗೇಲಿ ಮಾಡುತ್ತಾ, ಉತ್ಪ್ರೇಕ್ಷೆಯಾಗೆ ಹೇಮಂತನ ನೃತ್ಯವನ್ನು ಗೇಲಿ ಮಾಡುತ್ತಾ ಮತ್ತೆ ಹರಟೆಗೆ ಕುಳಿತೆವು! ಮುಂದಿನ ತಾಸಿನ ಹರಟೆ ಈ ಹಾವಿನ ಬಗ್ಗೆ ಹಾಗು ನಮ್ಮ blacky ಮಾಡಿದ ಅವಾಂತರದ ಬಗ್ಗೆ ನಡೆಯಿತು! ನಾನು ಈ ಮೊದಲೆ ಹೇಳಿದ ಹಾಗೆ ವಿಜಯ್ ಮನೆಯಲ್ಲಿರಬೇಕಾದರೆ ಪಂಚೆ - ಬನಿಯನ್‌ನಲ್ಲಿರುವುದು ರೂಢಿ. Blacky ಎರಡನೆ ಬಾರಿ ಹಾವನ್ನು ಎಸೆದಾಗ ಅದು ವಿಜಯ್ ಬೆನ್ನಿಗೆ ಬಡಿದಿತ್ತು. ಹಾವು ಸ್ವಲ್ಪ ಮೇಲೆ ಹಾರಿ ಅದು ಅವನ ಬನಿಯನ್ ಒಳಗೆ ಬಿದ್ದಿದ್ದರೆ! ಇದು ನನ್ನ ತಲೆಯಲ್ಲಿ ಸಂಚರಿಸಲು ನನಗೆ ನಿಜವಾದ ದಿಗಿಲು ಶುರುವಾಗಿತ್ತು! ಹಾಗು ಹರಟೆಯಲ್ಲಿ ಇದನ್ನು ಪ್ರಸ್ತಾಪಿಸಲು ಎಲ್ಲರಿಗೂ ನಿಜವಾಗಿಯೂ ದಿಗಿಲಾಯಿತು!

Wednesday, April 18, 2012

ಬೇಸಿಗೆ ಮಳೆ




ಮಳೆ ಬಿದ್ದರೆ ಬೆಂಗಳೂರಿನ ಬಹುತೇಕ ರಸ್ತೆಗಳು ಹೊಳೆಯಾಗಿರುತ್ತದೆ. ಮಳೆಯಲ್ಲಿ ನೆನೆಯುವುದು ನನಗೆ ಬಹಳ ಇಷ್ಟ. ಅದರಲ್ಲೂ ಕರೀಶ್ಮಾಳ ಜೊತೆ ನೆನೆಯುವುದೆಂದರೆ ಇನ್ನೂ ಪ್ರೀತಿ! ಆದರೆ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಓಡಿಸುತ್ತಾ ನೆನೆದರೆ ಸ್ವಲ್ಪ ಜಾಸ್ತೀನೆ ಗಲೀಜು ಆಗುತ್ತದೆ. ಅಕ್ಕ ಪಕ್ಕ ಹೋಗುವ ವಾಹನಗಳೆಲ್ಲಾ ರಸ್ತೆಯ ಮೇಲಿರುವ ಮಳೆ ನೀರನ್ನು ಹಾರಿಸುತ್ತ ಹೋಗುತ್ತವೆ. ಅದು ಮಳೆ ನೀರಾಗಿದ್ದರೆ ಜಾಸ್ತಿನೆ ಖುಷಿ ಆಗುತಿತ್ತು! ಆದರೆ ಅದು ಮಳೆ ನೀರಿನೊಂದಿಗೆ ಬೆರೆತಿರುವ ಚರಂಡಿ ನೀರು! ಬೇಸಿಗೆಯ ಮಳೆ ಸ್ವಲ್ಪ ಜೋರಾಗೆ ಆಗಿತ್ತು. ಇಂಥಾ ಸಮಯದಲ್ಲಿ ಶುಕ್ರವಾರ ಸಂಜೆ ಹೇಗೋ ಕೆಲಸವನ್ನು ಬೇಗ ಮುಗಿಸಿ ಮೈಸೂರಿಗೆ ಹೊರಟಿದ್ದೆ. ಕರೀಶ್ಮಾಳ ಜೊತೆಯೇ ಹೊರಟರೆ ಅಪ್ಪನಿಗೆ ಮನೆ ತಲುಪುವ ತನಕ ಭಯ; ಅದಕ್ಕೆ ಕರೀಶ್ಮಾಳನ್ನು ಚಿಕ್ಕಪ್ಪನ ಮನೆಯಲ್ಲಿ ಬಿಟ್ಟು ಅವರ ಜೊತೆ ಸ್ವಲ್ಪ ಹೊತ್ತು ಮಾತನಾಡಿ ಬಸ್ಸಿನಲ್ಲಿ ಹೊರಡುವುದು ರೂಢಿ. ಇನ್ನೂ St.Johns signal ಬಳಿ ಇದ್ದೆ, ಇನ್ನೇನು ದಾಟಬೇಕಿತ್ತು ಸೂಚನೆ ಕೆಂಪಾಯಿತು. St.Johns signal ನಿಂದ Forum mall ರಸ್ತೆಗೆ ಹೋಗಬೇಕಿತ್ತು, ದ್ವಿಮುಖ ರಸ್ತೆಯ ಬಲ ಬದಿಯಲ್ಲಿ ನಿಂತಿದ್ದೆ. ನನ್ನ ಪಕ್ಕದಲ್ಲಿ ರಸ್ತೆ ವಿಭಜಕ, ಅದರ ಪಕ್ಕದಲ್ಲಿ ಕೊಚ್ಚೆ ಯಾವುದೇ ವಾಹನ ಹೋದರೂ ಸಿಡಿದು ನನ್ನನ್ನು ಗಲೀಜು ಮಾಡಲು ಹಾತೊರೆಯುತ್ತಿರುವಂತಿತ್ತು! ಕೊಚ್ಚೆಯ ನೀರಿನಲ್ಲಿ ಕಾಣುತ್ತಿದ್ದ ನನ್ನ ಬಿಂಬ ಶಿರಸ್ತ್ರಾಣದ ಮರೆಯಲ್ಲಿ ನಗುತ್ತಿರುವಂತೆ ಭಾಸವಾಯಿತು! ಅದೇ ಸಮಯಕ್ಕೆ ಸರಿಯಾಗಿ ಯಾವುದೋ ವಾಹನ ಜೋರಾಗಿ ನನ್ನ ಪಕ್ಕ ಹೋಗಲು ಕೊಚ್ಚೆ ನನ್ನ ಮೇಲೆ ಸಿಡಿಯಿತು! ಈಗ ನನ್ನ ಬಿಂಬ ನನ್ನನ್ನು ನೋಡಿ ನಿಜವಾಗಿಯು ನಗಲು ಶುರು ಮಾಡಿತ್ತು, ಯಾಕೆಂದರೆ ನನ್ನ ಬೆಪ್ಪು ತನಕ್ಕೆ ನಾನೇ ನಗಲು ಶುರು ಮಾಡಿದ್ದೆ!! ಅದೃಷ್ಟಕ್ಕೆ ನನ್ನನ್ನು ನೋಡಿ ನಗಲು ಪಕ್ಕದಲ್ಲಿ ಯಾರೂ ಇರಲಿಲ್ಲ, ಸ್ವಲ್ಪ ದೂರದಲ್ಲಿ ಇದ್ದ ಜನಕ್ಕೆ ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲೆ ನನ್ನ ಸುತ್ತ ಮುತ್ತಲೆಲ್ಲಾ ವಾಹನಗಳು ತುಂಬಿಕೊಂಡವು, ದ್ವಿಚಕ್ರ ವಾಹನಗಳೇ ಜಾಸ್ತಿ. ಎದುರಿನಿಂದ ಮತ್ತೊಂದು ವಾಹನ ಕೊಚ್ಚೆಯ ಬಳಿಯೆ ಬರುತ್ತಿತ್ತು! ಅದನ್ನು ಗಮನಿಸಿದ ನಾನು ಪಕ್ಕಕ್ಕೆ ಇಳಿದು ಕರೀಶ್ಮಾಳ ಮರೆಯಲ್ಲಿ ಅವಿತುಕೊಂಡೆ. ನನಗೆ ಕೊಚ್ಚೆ ಹಾರಲಿಲ್ಲ, ನನ್ನ ಹಿಂದೆ ಸಾಲಾಗಿ ನಿಂತಿದ್ದವರೆಲ್ಲರಿಗೂ ಕೊಚ್ಚೆಯ ಸ್ಪೋಟವೇ ಆಯಿತು! ಅದರಲೊಬ್ಬ ಹಾರಿಸಿದವನಿಗೆ ಸಂಸ್ಕೃತ ಹಿತವಚನಗಳನ್ನು ನೀಡಿದ. ಇನ್ನೊಬ್ಬ ನನ್ನನ್ನು ನೋಡಿ "ಬುದ್ಧಿವಂತರು ಸಾರ್ ನೀವು" ಎಂದ!!! ಅವನಿಗೇನು ತಿಳಿದಿತ್ತು ನಿಮಿಷದ ಹಿಂದೆಯಷ್ಟೆ ಬೆಪ್ಪನಾಗಿದ್ದೆ ಎಂದು!!! ಅವನಿಗೆ ಚಿಕ್ಕ smile ನೀಡಿ ಯೋಚಿಸಿದೆ, ನಿಜ ಎನಿಸಿತು "Experience makes man (not WOMAN) better!!!" ಅಂಥ! ಚಿಕ್ಕಪ್ಪನ ಮನೆ ತಲುಪಿ ಒದ್ದೆ ಬಟ್ಟೆಗಳನೆಲ್ಲಾ ಬದಲಿಸಿ ಶುಭ್ರವಾದೆ. ಚಿಕ್ಕಮ್ಮ ನೀಡಿದ ಕಾಫಿ ಹೀರುತ್ತಾ ಅವರೊಂದಿಗೆ ಮಾತನಾಡುತ್ತಾ ಕಾಲ ಕಳೆದೆ. ಬೆಳಗ್ಗೆ ಬೇಗ ಎದ್ದು ಹೊರಡುವುದೆಂದು ತೀರ್ಮಾನಿಸಿದೆ.

ಮುಂಜಾನೆಯೂ ಮಳೆ ಹನಿಯುತ್ತಲೆ ಇತ್ತು. ನಾಯಂಡಹಳ್ಳಿಯಲ್ಲಿ ಬಸ್ಸು ಹತ್ತುವುದು ನನಗೆ ಖಾಯಮ್ಮು. ಮಳೆಯಿಂದ ನಾಯಂಡಹಳ್ಳಿಯ ಸುತ್ತೆಲ್ಲಾ ಗಬ್ಬಾಗಿತ್ತು. ಸಧ್ಯ ಮೋರಿ ಉಕ್ಕಿರಲಿಲ್ಲ!  ನಿಲುಗಡೆಯತ್ತ ಇನ್ನೇನು ತಲುಪಬೇಕು ಒಂದು ಹೊಂಡದೊಳಕ್ಕೆ ಕಾಲಿಟ್ಟೆ! ದುರಾದೃಷ್ಟ ಅನ್ನುವುದಕ್ಕಿಂತ ಅದೃಷ್ಟ ಎನ್ನಬೇಕು, ನಾಯಂಡಹಳ್ಳಿಯಲ್ಲಿ ಚರಂಡಿ ನೀರಿಲ್ಲದ ಒಂದು ಹೊಂಡ! ಹೊಂಡದ ಪೂರ್ತಿ ಕೆಸರಿತ್ತು. ಮಂಡಿಯವರೆಗೂ ಕೆಸರಾದ ಕಾಲನ್ನು ಎಲ್ಲಿ ತೊಳೆಯುವುದೋ ತೋಚಲಿಲ್ಲ. ನಾಯಂಡಹಳ್ಳಿಯ ಯಾವ ರಸ್ತೆಯಲ್ಲಿ ನಲ್ಲಿ ಇದೆಯೋ, ಇದ್ದರು ಯಾವ ನಲ್ಲಿಯಲ್ಲಿ ನೀರು ಬರುತ್ತದೊ ಯಾರಿಗೆ ಗೊತ್ತು! ೨ ನಿಮಿಷ ಯೋಚಿಸಿ ಸಮೀಪದಲ್ಲಿದ್ದ ಬೇಕರಿಯಲ್ಲಿ ೨ ಲೀಟರ್ bisleri bottle ಖರೀದಿಸಿದೆ! ಬೆಂಗಳೂರಿನಲ್ಲಿ ಸ್ನಾನ ಮಾಡುವುದಕ್ಕೆ ಗಡಸು ನೀರು, ನಾಯಂಡಹಳ್ಳಿಯಲ್ಲಿ ಕೆಸರಾದ ನನ್ನ ಕಾಲು ತೊಳೆಯಲು ಬಿಸ್ಲೇರಿ ನೀರು!. ಹೇಗೋ ಸ್ವಚ್ಛವಾಗಿ ಒದ್ದೆ ಬೂಟ್ಸಿನಲ್ಲೆ ಬಸ್ಸನ್ನು ಹತ್ತಿದೆ, ಚೀಟಿ ಚೀಟಿ ಎಂದು ಬಡಿದುಕೊಳ್ಳುತ್ತಿದ್ದ ನಿರ್ವಾಹಕನಿಂದ ಮೈಸೂರಿಗೆ ticket ಪಡೆದು ನೆಮ್ಮದಿಯ ಉಸಿರು ಬಿಟ್ಟೆ. ಒದ್ದೆಯಾಗಿದ್ದ ನನ್ನ jacket ಅನ್ನು plastic coverನೊಳಗೆ ಹಾಕಿ bagನೊಳಗೆ ತುರುಕಿದೆ. ರಾಜರಾಜೇಶ್ವರಿ ನಗರದ ಹೆಬ್ಬಾಗಿಲ ಬಳಿ ಒಂದು ಹುಡುಗಿ ಬಸ್ಸನ್ನು ಏರಿ ಖಾಲಿಯಿದ್ದ ನನ್ನ ಮುಂದಿನ ಬಲ ಆಸನದಲ್ಲಿ ಕುಳಿತಳು. ಅಷ್ಟು ಚೆಂದವಿರುವ ಹುಡುಗಿ; ಎಂದಿನಂತೆ ನನ್ನ ಗಮನ ಅವಳೆಡೆಗೆ ಕೇಂದ್ರೀಕೃತವಾಯಿತು ಮೂರು ತಾಸು ಸಮಯ ಕಳೆಯುವುದು ಕಷ್ಟವಲ್ಲ ಎನಿಸಿತು! ಆಕೆಯೂ ತನ್ನ ಒದ್ದೆಯಾದ jacket ಅನ್ನು ಕಳಚಿ ಸೀಟಿನಲ್ಲೆ ಒಣಗಲು ಹಾಕಿದಳು. ಏನಾದರೂ ಮಾತನಾಡಿಸುತ್ತಾಳ ಅಥವಾ ನಾನೇ ನೆಪವೊಡ್ಡಿ ಎನಾದರು ಮಾತಿಗೆಳೆಯೆಲಾ ಹೀಗೆ ನಾನಾ ರೀತಿಯಲ್ಲಿ ಯೋಚಿಸುತ್ತಾ ಪ್ರಯಾಣಿಸಿದೆ. ಶ್ರೀರಂಗಪಟ್ಟಣ ದಾಟಿದ ಮೇಲೂ ಕನಿಷ್ಟ, ದೃಷ್ಟಿಗಳ ಮಿಲನವೂ ಆಗಲಿಲ್ಲ, ಇದು ಇಲ್ಲಿಗೆ ಮುಗಿದ ಕಥೆ ಯೋಚಿಸಬಾರದು ಎಂದು ಸುಮ್ಮನಾದೆ.

ಸಾಮಾನ್ಯವಾಗಿ ಎಂದೂ ಕಾಣದ ticket checkingನವರು ಬಸ್ಸೇರಿದರು! ನನ್ನ ಬಳಿ ಬರಲು, ಸುಮ್ಮನೆ ನನ್ನ ಸಮಯ ಹಾಳು ಮಾಡುತ್ತಾರೆ ಎಂದು ಗೊಣಗಿಕೊಂಡೇ wallet ತೆರೆದೆ. ಅಲ್ಲಿ ticket ಇರಲಿಲ್ಲ, ಜೇಬಿನಲ್ಲೆಲ್ಲಾ ಹುಡುಕಿದೆ, ಸಿಗಲೇಇಲ್ಲ! ಈಗ ನಾನು ಅವರ ಸಮಯ ಹಾಳು ಮಾಡುತ್ತಿದ್ದೇನೆ ಎನಿಸಿತು. "ಸಾರ್ ticket ಕೊಂಡಿದ್ದೆ ಕಾಣುತ್ತಿಲ್ಲ", "ಚೀಟಿ ತೋರಿಸು ಇಲ್ಲದ್ದಿದ್ದರೆ ದಂಡ ಹಾಕುತ್ತೇನೆ", "ಸಾರ್ ನನ್ನ ನೋಡಿದರೆ ticket ಕೊಳ್ಳದೆ ಪ್ರಯಾಣಿಸುವವನ ರೀತಿ ಕಾಣುತ್ತೀನಾ, ಪ್ರತಿ ವಾರ ಮೈಸೂರಿಗೆ ಓಡಾಡುತ್ತೇನೆ ticket ಕೊಳ್ಳದೆ ಯಾವ ದಿನವು ಪ್ರಯಾಣಿಸಿಲ್ಲ", "ನಿನ್ನಂಥಾ ಸಾವಿರಾರು ಜನರನ್ನ ನೋಡಿದ್ದೇವೆ, ಸೂಟು - ಬೂಟು ಹಾಕಿಕೊಂಡು ಚೀಟಿ ಕೊಳ್ಳದೆ ಸಿಕ್ಕಿ ಬಿದ್ದಿದ್ದಾರೆ ನೀನೇನು ಮಹಾ! ಪ್ರತಿ ವಾರ ಓಡಾಡುವವನಿಗೆ ಚೀಟಿ ಜೋಪಾನ ಮಾಡುವುದು ಗೊತ್ತಿಲ್ಲವಾ! ಸುಮ್ಮನೆ ನಮ್ಮ ಸಮಯ ಹಾಳು ಮಾಡಬೇಡ ದಂಡ ಕಟ್ಟು ಇಲ್ಲ ಚೀಟಿ ತೋರಿಸು", "ಸಾರ್ ನಿರ್ವಾಹಕರನ್ನೆ ಕೇಳಿ ನಾನು ticket  ಕೊಂಡಿದ್ದೇನೆ", "ಸಾರ್ ಚೀಟಿ ಕೊಟ್ಟಿರೋದು ಜ್ನಾಪಕ ಇದೆ ಆದರೆ ನೀವು ಅದನ್ನು ತೋರಿಸದಿದ್ದರೆ ದಂಡ ಕಟ್ಟಲೇಬೇಕು", ನಿರ್ವಾಹಕ ಹೇಳಿದ. "ಸಾರ್ ಮತ್ತೊಂದು ticket ಕೊಡಿ ದುಡ್ಡು ಕೊಡುತ್ತೇನೆ", "ಸಾರ್ ಮತ್ತೊಂದು ಸಲ ಚೀಟಿ ಕೊಟ್ಟರೆ ಸಾಮರ್ಥ್ಯಕ್ಕಿಂತ ಜಾಸ್ತಿ ಜನರನ್ನು ಹತ್ತಿಸಿದ್ದೀಯ ಎಂದು ನನಗೆ ದಂಡ ಹಾಕುತ್ತಾರೆ ನನ್ನನ್ನು ಮಧ್ಯ ಎಳೆಯಬೇಡಿ" ಹೀಗೆ ಮಾತಿಗೆ ಮಾತುಗಳನ್ನಾಡುತ್ತಾ ಮೈಸೂರಿನ ಬಸ್ಸು ನಿಲ್ದಾಣ ತಲುಪಿದೆವು. ಇನ್ನು ಇವರಿಗೆ ದಂಡ ಕಟ್ಟಬೇಕು ಇಲ್ಲವೆ ಲಂಚ ಕೊಡಬೇಕು, ಇದು ಒಳ್ಳೆ ಪೀಕಲಾಟವಾಯಿತಲ್ಲ ಎಂದು ಯೋಚಿಸುತ್ತಿರಬೇಕಾದರೆ ನನ್ನ ಗಮನ ಮತ್ತೆ ಆ ಹುಡುಗಿಯ ಬಳಿ ಹೋಯಿತು. ಅವಳು ಇಳಿಯಲು ಅಣಿಯಾಗುತ್ತಾ ತನ್ನ jacket ಹಾಕಿಕೊಂಡಳು. ಆಗ ನನಗೆ ಹೊಳೆಯಿತು! ನನ್ನ ticket jacket ಒಳಗಿದೆ ಎಂದು! checking ನವರು ನನ್ನನ್ನು ಬೈಯುತ್ತಲೆ ಮಾಯವಾದರು. ಈ ಹುಡುಗಿಯಿಂದ ಏನೋ ಒಂದು ಒಳ್ಳೆಯದಾಯಿತಲ್ಲ ಅವಳಿಗೆ ದನ್ಯವಾದ ಹೇಳಿ ಈ ನೆಪದಲ್ಲಾದರು ಮಾತನಾಡಿಸಬೇಕು ಎಂದು ಬಸ್ಸಿನಿಂದ ಕೆಳಗಿಳಿದು ಹುಡುಕಿದೆ, ತಡವಾಗಿತ್ತು ಆಕೆಯೂ ಮಾಯವಾಗಿದ್ದಳು ಮಳೆ ಮಾತ್ರ ಇನ್ನೂ ಹನಿಯುತ್ತಲೇ ಇತ್ತು!