Tuesday, March 11, 2014

ಚಾಲಕರ ಹನಿಗವನಗಳು


ಬೆಂಗಳೂರು ನಗರದಲ್ಲಿ IT-BT ಬೆಳೆಯುವುದಕ್ಕೆ ಶುರುವಾದ ಮೇಲೆ ಅದರ ಜೊತೆಗೆ ಬೆಳೆಯಲು ಶುರು ಮಾಡಿದ ಮತ್ತೊಂದು ಉದ್ಯಮವೆಂದರೆ ಸಾರಿಗೆ ಉದ್ಯಮ. ನಮ್ಮ ಬೆಂಮಸಾಸಂ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಹಾಗು ಕರಾರಸಾಸಂ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಇಡೀ ದೇಶದಲ್ಲೆ ಅತ್ಯುತ್ತಮ ಸೇವೆ ಒದಗಿಸುತ್ತಿದ್ದರು ಟ್ಯಾಕ್ಸಿ, ಆಟೊಗಳ ಸಂಖ್ಯೆಗೆ ಹಾಗು ಅದನ್ನು ಬಳಸುವವರ ಸಂಖ್ಯೆಗೆ ಕಡಿಮೆ ಇಲ್ಲ. ಈ ಟ್ಯಾಕ್ಸಿ ಹಾಗು ಆಟೊ ಚಾಲಕರು ಬೆಂಗಳೂರಿನ ರಸ್ತೆ ಹಾಗೂ ಸಂಚಾರ ದಟ್ಟಣೆಯ ಮೇಲೆ ಯುದ್ದವನ್ನೇ ಸಾರಿರುತ್ತಾರೆ.

ಆ ಅಕ್ರಮಣಶೀಲತೆಯನ್ನು ಕೆಲವರು ಹನಿಗವನಗಳಲ್ಲೂ ವ್ಯಕ್ತಪಡಿಸುತ್ತಾರೆ. ಟ್ಯಾಕ್ಸಿ ಹಿಂದೆ ಬರೆದಿದ್ದ ಕೆಲುವು ಆಯ್ದ ತುಣುಕುಗಳು:

ಹಾಸನದ ಹಂಸ
ಮುಟ್ಟಿದರೆ ಧ್ವಂಸ!

ಹುಬ್ಬಳ್ಳಿ ಹುಲಿ
ಮುಟ್ಟಿದರೆ ಬಲಿ!

ನೀವು ಹಾರಿಸಿದರೆ ಗಾಳಿಪಟ
ನಾವು ನುಗ್ಗಿಸಿದರೆ ಧೂಳಿಪಟ

ಗೌಡ್ರು ಗುತ್ತು
ಕರ್ನಾಟಕಕ್ಕೆ ಗೊತ್ತು

ನನ್ನ ಹುಟ್ಟುಗುಣ ಅಹಂಕಾರ
ಈ ಭೂಪನಿಗೆ ಅದೇ ಅಲಂಕಾರ!

ಈ ಚಾಲಕರು ಹನಿಗವನಗಳನ್ನು ಕೇವಲ ತಮ್ಮ ಆಕ್ರಮಣಶೀಲತೆಯನ್ನು ಪ್ರದರ್ಶಿಸುವುದಕ್ಕೆ ಸೀಮಿತವಾಗಿಸಿಲ್ಲ. ಈ ಆಕ್ರಮಣಕಾರರ ಮಧ್ಯೆ ಒಬ್ಬ ಆಟೊ ಚಾಲಕ ಸಮಾಜಕ್ಕೆ ಒಂದು ಸಂದೇಶ ಕೂಡ ಕೊಟ್ಟಿದ್ದ:

ಬ್ರಹ್ಮ ಬರೆಯುವ ಹಣೆಯ ಬರಹವನ್ನು ಅಮ್ಮ ಬರೆದಿದ್ದರೆ, 
ಈ ಲೋಕದಲ್ಲಿ ಪಾಪಿಗಳೆ ಇರುತ್ತಿರಲಿಲ್ಲ!

ಇಷ್ಟೆ ಅಲ್ಲ,  ತಮ್ಮ ನೆಚ್ಚಿನ ನಟರ ಮೇಲಿರುವ ಅಭಿಮಾನ ಹಾಗೂ ಪ್ರೀತಿಯನ್ನು ವ್ಯಕ್ತಪಡಿಸಲೂ ಬಳಸುತ್ತಾರೆ. ಡಾ. ವಿಷ್ಣು ಮೇಲಿನ ಈ ತುಣುಕು ಬಹಳಷ್ಟು ಆಟೋ ಹಾಗೂ ಟ್ಯಾಕ್ಸಿಗಳ ಮೇಲೆ ಕಾಣಬಹುದು:

ವಿಷ್ಣುವಿಲ್ಲದ ನಾಡು
ಸಿಂಹವಿಲ್ಲದ ಕಾಡು

ಅವರು ರಸ್ತೆಯಲ್ಲಿ ಎಷ್ಟು ಆಕ್ರಮಣಶೀಲರಾಗಿರುತ್ತಾರೊ ಪ್ರೀತಿಯಲ್ಲಿ ಅಷ್ಟೆ ಮುಗ್ಧರಾಗಿರುತ್ತಾರೆ ಎನಿಸುತ್ತದೆ. ಪ್ರೀತಿಯಲ್ಲಿ ಬಿದ್ದಿಲ್ಲದ ಚಾಲಕರು ತಮ್ಮ ಕನಸಿನ ರಾಣಿಯರಿಗೆ ಬರೆಸಿರುವ ಹನಿಗವನಗಳನ್ನು ನೋಡಿ:

ಬಾರೆ ನನ್ನ ರೋಜ
ನಾನೆ ತರಕಾರಿ ರಾಜ
ಕಣ್ಣಿದ್ರೆ ನನ್ನ ನೋಡಿ
ಮನಸಿದ್ರೆ ಒಮ್ಮೆ ಕಾಲ್ ಮಾಡಿ

ಕಣ್ಣಿಗೆ ನೀನು ಕಾಣಿಸುವ ತನಕ ಕಣ್ಣೀರು ಬರಲ್ಲ
ಹೃದಯದಲ್ಲಿ ನೀನು ಇರುವ ತನಕ ಮಿಡಿತ ನಿಲ್ಲಲ್ಲ
ದೇಹದಲ್ಲಿ ಕೊನೆ ಉಸಿರಿರುವ ತನಕ ನಿನ್ನ ಮೇಲಿನ ಪ್ರೀತಿ ಸಾಯೊಲ್ಲಾ!

ನಿನ್ನ ಕಂಗಳಾಡೋ ನೋಟದಾಟದಲಿ
ನಾನು ಸ್ಪರ್ದಿಸಿ ಸೋತರೆ ಆಗುವ ಆಶ್ಚರ್ಯವೇನಿಲ್ಲ

ಮಂಡ್ಯದ ಹುಡುಗನ heart
ಸಕ್ಕರೆಯಂತೆ ತುಂಬಾ sweet!!!

ನಿನ್ನ ಮರೆಯೋ ದಾರಿ ನನಗೆ ಗೊತ್ತಿಲ್ಲ
ಗೊತ್ತಿಲ್ಲದ ಆ ದಾರಿಯ ಹುಡುಕುವ ಮನಸಿಲ್ಲ
ನೀ ಕಾಣದ ಆ ಪ್ರೀತಿಯ ಬೇರೆಯವರಿಗೆ ನಾ ಹೇಗೆ ಕೊಡಲಿ?

ಚಿಂತೆ ಯಾಕೆ ಚಕೋರಿ
ಹತ್ತು ಬಾ ನನ್ನ ಅಂಬಾರಿ

ಆದರೆ ಬಹುತೇಕ ಚಾಲಕರು ಪ್ರೀತಿಯಲ್ಲಿ ಮೋಸ ಹೋಗಿರುವವರು ಎನಿಸುತ್ತದೆ!!! ಕೆಳಗಿನವುಗಳನ್ನು ಓದಿ ನೋಡಿ:

ಆಟೊ ಹಿಂಬದಿಯಲ್ಲಿ ಬರೆಸಿದ್ದ ಕೆಲವು ತುಣುಕುಗಳು:

ಹುತ್ತದ ಹಿಂದೆ ಹೋದರೆ ಹಾವು ಗ್ಯಾರಂಟಿ
ಹುಡುಗಿಯ ಹಿಂದೆ ಹೋದರೆ ಸಾವು ಗ್ಯಾರಂಟಿ ಗೆಳೆಯ

ಸಮುದ್ರದಲ್ಲಿ ಬಿದ್ದರೆ ಮುತ್ತು ಎತ್ತುವೆ
ಪ್ರೀತಿಯಲ್ಲಿ ಬಿದ್ದರೆ ಭಿಕ್ಷೆ ಎತ್ತುವೆ my friend!

ಕಾಡಿನ ಹುಲಿ ಹಿಂದೆ ಹೋಗು
ಆದ್ರೆ ಕಾಲೇಜ್ ಹುಡುಗಿ ಹಿಂದೆ ಹೋಗ್ಬೇಡ

ಮಾಜಿ ರಾಷ್ಟ್ರಪತಿಯ ಅಭಿಮಾನಿ ಬರೆಸಿದ್ದುದು:

ಹೃದಯದ ರೋಗಕ್ಕೆ ಇಲ್ಲ ಮುಲಾಮು
ಅದಕ್ಕೆ ಈಗಲೂ ಬ್ರಹ್ಮಚಾರಿ ಅಬ್ದುಲ್ ಕಲಾಮು!!!

ಟ್ಯಾಕ್ಸಿಗಳ ಹಿಂದೆ ಕಂಡ ಕೆಲವು ತುಣುಕುಗಳು:

ಹಾರುವ ಹಕ್ಕಿಗೆ ಅಲಂಕಾರ
ಪ್ರೀತಿಸುವ ಹುಡುಗಿಗೆ ದುರಹಂಕಾರ

ಮಚ್ಚಲ್ಲಿ ಬಿದ್ರೆ ಒಂದೇ ಏಟು
ಪ್ರೀತೀಲಿ ಬಿದ್ರೆ ಬದುಕೋದೆ doubtu

ಮುಳ್ಳಿಲ್ಲದ ಗುಲಾಬಿ ಬೆಳೆದವರಿಲ್ಲ
ನೋವಿಲ್ಲದ ಪ್ರೀತಿ ಪಡೆದವರಿಲ್ಲ!

ಕಳ್ಳಿ ಹಾಲಿನಂತೆ ಹುಡುಗಿಯರು
ಹಾಲು ಎಂದು ಕುಡಿದರೆ ಸಾಯೋದು ಗ್ಯಾರಂಟಿ!

ಜೀವ ಕೊಟ್ಟಿದ್ದು ತಾಯಿ
ಜೀವನ ಕೊಟ್ಟಿದ್ದು ತಂದೆ
ಎರಡನ್ನು ಕಿತ್ತುಕೊಂಡಿದ್ದು
ಈ ಮಿಟಿಕಿಲಾಡಿ ಹುಡುಗಿ!

ಮೋಸದ ಪ್ರೀತಿಗೆ ಮನಸ್ಸು ಕೊಡುವೆ
ಪ್ರಾಮಾಣಿಕ ಪ್ರೀತಿಗೆ ಕೈ ಕೊಡುವೆ

ಇಷ್ಟು ಜನರ ಮಧ್ಯೆ ಆಂಗ್ಲ ಭಾಷೆಯಲ್ಲೂ ಬರೆಸಿದ್ದನೊಬ್ಬ:

friendship is best
relationship is waste!

ಹೀಗೆ ವಾಹನಗಳ ಹಿಂಬದಿಯಲ್ಲಿ ಬರೆಸಿರುವ ಪುಟ್ಟ ಸಾಲುಗಳನ್ನು ಓದಲು ನಮಗೆ ತಮಾಷೆ. ಆದರೆ ಅದನ್ನು ಬರೆಸಿರುವವರ ಮನಸ್ಸು ಎಷ್ಟು ನೊಂದಿರಬಹುದು ಎಂದು ನಾನು ಯಾವತ್ತು ಊಹಿಸಿರಲಿಲ್ಲ. ನನ್ನ ಕಛೇರಿಯ ಟ್ಯಾಕ್ಸಿ ಚಾಲಕ ಪ್ರೀತಿಯಲ್ಲಿ ಮೋಸ ಹೋಗಿದ್ದ. ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿ ಹಾಗು ಈತನ ಮಧ್ಯೆ ಪ್ರ‍ೀತಿ ಶುರುವಾಗಿತ್ತು. ಅವನ ಇಂಡಿಕಾದಲ್ಲಿ ಎಲ್ಲೆಲ್ಲಿ, ಅದೆಷ್ಟು ಸುತ್ತಾಡಿದ್ದಳೊ ಬಹುಶಃ ಅವಳಿಗೆ ಲೆಕ್ಕ ಸಿಗುವುದಿಲ್ಲ! ಯಾವ ಕಾರಣಕ್ಕೋ ಏನೋ ಮನೆಯಲ್ಲಿ ತೋರಿಸಿದ್ದ ಬೇರೆ ಹುಡುಗನನ್ನು ಒಪ್ಪಿ ಅವನಿಗೆ ಹಾಗು ಅವನ ಇಂಡಿಕಾಗೆ ಟಾಟಾ ಮಾಡಿದ್ದಳು! ಈ ಚಾಲಕ ತನ್ನ ಕಥೆಯನ್ನೆಲ್ಲಾ ನನಗೆ ಹೇಳಬೇಕಾದರೆ ಅವನಿಗೆ ಆಗಿದ್ದ ನೋವು ನನಗೆ ಅರ್ಥವಾಯಿತು. ನಾನೇನೋ ಹುಡುಗಿಯರ ಸಂಖ್ಯೆಗೇನು ಕಮ್ಮಿ ಬೇರೊಬ್ಬಳು ಸಿಗುತ್ತಾಳೆ ಎಂದು ಸಮಾಧಾನ ಮಾಡಲು ಪ್ರಯತ್ನಿಸಿದೆ, ಆ ಸಮಯದಲ್ಲಿ ’ಹೌದು ನಿಜ’ ಎಂದದ್ದು ಅವನ ಬಾಯಿ ಮಾತ್ರ ಅವನ ಮನಸ್ಸಿನಲ್ಲಿ ಅದೇ ಪ್ರ‍ೀತಿ ಇನ್ನು ಎಲ್ಲೋ ಅಡಗಿ ಕುಳಿತಿದೆ ಎನ್ನಿಸಿತು. ಅವನಿಗೆ ಅವಳ ಮೇಲೆ ಸ್ವಲ್ಪ ಕೋಪವು ಇತ್ತು. ನನ್ನಲ್ಲಿ ’ಸಾರ್ ಪ್ರ‍ೀತಿಯಲ್ಲಿ ಸೋತಿರುವ ಹೃದಯಕ್ಕೆ ತಾಗುವಂತ ಹನಿಗವನಗಳನ್ನು ಕೊಡಿ, ನನ್ನ ಟ್ಯಾಕ್ಸಿ ಹಿಂದೆಯು ಹಾಕಿಸುತ್ತೇನೆ’ ಎಂದ. ೨ ಹನಿಗವನಗಳನ್ನು ಆತನಿಗೆ ನೀಡಿದೆ:

ಹುಡುಗರಾಗಿ ಹುಟ್ಟಿದ ಮೇಲೆ,
ಇರಲೇಬೇಕು ಪ್ರೀತಿಯ ಸೆಲೆ,
ಹುಡುಗಿಯರಿಂದಲೆ ಅದರ ಕೊಲೆ!

ಪ್ರೀತಿ ನೀ ಇಲ್ದೆ ನಾನು ಹೇಗಿರ್ಲಿ,
ಹುಡ್ಗೀರ್‌ಗೆ ಪ್ರೀತಿ ಕಾಣ್ಸೋದೆ ಇಲ್ಲ ಏನ್ಮಾಡ್ಲಿ?

ಇದನ್ನು ಓದಿದ ತತ್ ಕ್ಷಣ ಅವನ ಪ್ರತಿಕ್ರಿಯೆ ಹೀಗಿತ್ತು ’ಸಾರ್ ಸ್ವಲ್ಪ ಜಾಸ್ತಿ ಆಗ್ಲಿಲ್ವ!!!’
ಬಹುಶಃ ಅವನಿಗೆ ನನ್ನ ಹನಿಗವನಗಳು ಇಷ್ಟವಾಗಲಿಲ್ಲವೆನಿಸುತ್ತದೆ. ಸ್ವಲ್ಪ ದಿನಗಳ ನಂತರ ನನ್ನನ್ನು ಸಂಧಿಸಿದಾಗ ಟ್ಯಾಕ್ಸಿ ಹಿಂಬದಿಯನ್ನು ನೋಡಲು ಹೇಳಿದ. ಅಲ್ಲಿ ಹೀಗೆ ಬರೆದಿತ್ತು:

ಪ್ರೀತಿ ಕಾಣದ ಹೃದಯಕೆ
ಅಂದವೆಷ್ಟಿದ್ದರೇನು ಚೆಂದ!

ಇಷ್ಟು ಜನರ ಮಧ್ಯೆ ಕೆಲುವು ತರ್ಕಬದ್ದ ಚಾಲಕರು ಕೂಡ ಇದ್ದಾರೆ:

my love is gone 
but not my life

ಇದನ್ನು ಓದಿದ ನಂತರ ನನಗೆ ನಿಜವಾಗಿಯೂ ಖುಷಿಯಾಯಿತು. ಒಬ್ಬ ಚಾಲಕನಾದರು ಮುಳುಗಿದ ಪ್ರೀತಿಯ ಗುಂಗಿನಲ್ಲಿ ಯಾತನೆ ಪಡದೆ ತನ್ನ ಜೀವನವನ್ನು ಸ್ವೀಕರಿಸಿದ್ದಾನೆ!

ಕೊನೆಗೊಂದು ಪಟಾಕಿ. ಇವನು ಬರೆಸಿರಿವುದರಲ್ಲಿ ವ್ಯಾಕರಣ ತಪ್ಪಾಗಿರಬಹುದು. ಆದರೆ ಆಂಗ್ಲ ಭಾಷೆ ಬಲ್ಲ ಯಾರಾದರೂ ಅವನ ವ್ಯಥೆ ಅರ್ಥ ಮಾಡಿಕೊಳ್ಳಬಹುದು:

money your hands any
people coming your back

No comments:

Post a Comment