Wednesday, June 29, 2011

ಫಿನಾಯಿಲ್


ಇಂಜಿನಿಯರಿಂಗ್ ಸಮಯ, ಬೃಹತ್ ಭವಿಷ್ಯದ ಬೆಂಬೆತ್ತಿ, ಕನಸುಗಳ ಆಶಾಗೋಪುರ ಗಗನವನ್ನು ಚುಂಬಿಸುವಂತೆ ಕಟ್ಟಿರುತ್ತೇವೆ. ಪರೀಕ್ಷೆಯ ಸಮಯದಲ್ಲಿ ನಾವೆಲ್ಲ ಹೇಗೆ ಹುಚ್ಚರಾಗಿರುತ್ತೇವೆ ಎಂದು ಪ್ರತಿಯೊಬ್ಬ ಇಂಜಿನಿಯರಿಂಗ್ ಓದಿರುವ ವಿದ್ಯಾರ್ಥಿ ಹಾಗು ಅವರ ಮನೆಯವರಿಗೆ ತಿಳಿದಿರುತ್ತದೆ. ಮುಂದೆ ಯಾರು ಎಷ್ಟು ಎತ್ತರಕ್ಕೆ ಬೆಳೆಯುತ್ತಾರೋ ದೇವರೆ ಬಲ್ಲ! ನಮ್ಮ ಕೆಲಸವೆಂದರೆ ಎಷ್ಟು ಆಗುತ್ತದೋ ಅಷ್ಟು ಕಷ್ಟಪಟ್ಟು ಓದುವುದು! ಎಷ್ಟು ಆಗುತ್ತದೋ ಅಷ್ಟೇ. ಅದಕ್ಕಿಂತ ಸ್ವಲ್ಪ ಹೆಚ್ಚು ಪರಿಶ್ರಮಿಸಿದರೆ ಶೇಕಡ ೪-೫% ಅಂಕೆ ಜಾಸ್ತಿಯಾಗಬಹುದು ಆದರೂ ಪ್ರತಿ ಪರೀಕ್ಷೆಗೂ ನಮ್ಮದೇ ಆದ ಪರಿಮಿತಿಯನ್ನು ನಾವೇ ಸೃಷ್ಟಿಸಿಕೊಂಡಿರುತ್ತೇವೆ! ಪರೀಕ್ಷೆ ಮುಗಿದ ಮೇಲೆ ಫಲಿತಾಂಶ ಬರುವ ಮುನ್ನ ನಮ್ಮ ಮನಸ್ಸು ಬಹಳ ಹಗುರವಾಗಿ ಒತ್ತಡವೆಲ್ಲ ಉಪಶಮನವಾಗಿರುತ್ತದೆ. ಇಂಥಾ ಸಮಯದಲ್ಲಿ ನಮ್ಮನ್ನು ಮತ್ತಷ್ಟು ರಂಜಿಸಿಕೊಳ್ಳಲು ನಮಗೆಲ್ಲ ಇದ್ದ ಒಂದೇ ಒಂದು ಆಟವೆಂದರೆ ಕ್ರಿಕೆಟ್! ಪರೀಕ್ಷೆ ಮುಗಿದ ಬಳಿಕವಂತು ಎಷ್ಟು ಉಲ್ಲಾಸಿತರಾಗಿರುತ್ತೇವೋ ಅದನ್ನು ಅನುಭವಿಸಿರುವವರಿಗೆ ಗೊತ್ತಾಗುವುದು. ಕೇವಲ ೩-೪ ವಾರಗಳ ರಜೆ ಕಳೆಯಲು ಒಬ್ಬೊಬ್ಬರದು ಒಂದೊಂದು ಕಲ್ಪನೆ. ನನ್ನದು, ಗೆಳೆಯರನ್ನೆಲ್ಲಾ ಸೇರಿಸಿ ಭವ್ಯ ಭಾರತದ ಅಚ್ಚುಮೆಚ್ಚಿನ ಆಟವಾದ ಕ್ರಿಕೆಟ್ಟಾಟವನ್ನು ಆಡುವುದು! ಬಹಳ ಜನರೇ ಸೇರುತ್ತಿದ್ದರು. ನಮ್ಮ ಮನೆಯ ಹತ್ತಿರವೇ ಇದ್ದ 'ಅಧ್ಯಯನ್' ಶಾಲೆಯ ಮೈದಾನದಲ್ಲಿ ೪ ಘಂಟೆಗೆ ಎಲ್ಲರನ್ನು ಸೇರಲು ಹೇಳಿದರೆ ೪:೩೦ರಷ್ಟೊತ್ತಿಗೆ ಒಬ್ಬೊಬ್ಬರಾಗಿ ಬಂದು ಸೇರುತ್ತಿದ್ದರು. ಮಹೀತ್ ಮತ್ತು ಆದರ್ಶ್ ನಮ್ಮ ಮನೆಗೆ ಬಂದ ಮೇಲೆ ನಾನು ಅವರ ಜೊತೆ ಹೊರಡುತ್ತಿದ್ದೆ.

ನನ್ನ ಗೆಳೆಯರೆಲ್ಲ ನಮ್ಮ ಮನೆಯನ್ನು ಗುರುತಿಸುತ್ತಿದ್ದುದು ನಮ್ಮ ಮನೆಯ ಮುಂದಿದ್ದ ಎರಡು ತೆಂಗಿನಮರಗಳಿಂದ. ಕಾಕತಾಳೀಯವೆಂದರೆ ನಮ್ಮ ಮನೆಯ ಹಿಂದಿನ ಬೀದಿಯಲ್ಲಿ ಕೂಡ ಎರಡು ತೆಂಗಿನಮರವಿದ್ದ ಮನೆಯಿತ್ತು. ಸುಮಾರು ಜನ ಅವರ ಮನೆ ಮುಂದೆ ನಿಂತು 'ವಿನಯ್ ವಿನಯ್' ಎಂದು ಕಿರುಚುತ್ತಿದ್ದರು. ೮-೧೦ ಬಾರಿ ಬಂದವರು ಕೂಡ ಹಿಂದಿನ ಬೀದಿಗೆ ಹೋಗಿ ಕಿರುಚಿದ್ದುಂಟು. ಅವರಲ್ಲಿ ಮಹೀತ್ ಹಾಗೂ ಆದರ್ಶ್ ಕೂಡ ಸೇರಿಬಿಟ್ಟರು. ಎಂದಿನಂತೆ ಆಟಕ್ಕೆ ಕೂಗಲು ಬಂದ ಇವರಿಬ್ಬರು ಹಿಂದಿನ ಬೀದಿಗೆ ಹೋಗಿ 'ವಿನಯ್ ವಿನಯ್' ಎಂದು ಕಿರುಚಿದ್ದಾರೆ. ಮನೆಯೊಡತಿ ಇದುವರೆವಿಗು ಯಾರಿಗೂ ಹಿತವಚನಗಳನ್ನು ನೀಡದೆ, ಇದು ಅವರ ಮನೆಯಲ್ಲ ಮುಂದಿನ ಬೀದಿಗೆ ಹೋಗಿ ಎಂದು ಕಳುಹಿಸುತ್ತಿದ್ದರು! ಆದರೆ ಈ ಬಾರಿ ಅವರು 'ಫಿನಾಯಿಲ್' ನಮಗೆ ಬೇಡಪ್ಪ ಎನ್ನುವುದೇ!!!

ಈಗ ತಪ್ಪು ಯಾರದ್ದು? 'ವಿನಯ್' ಯನ್ನು 'ಫಿನಾಯಿಲ್' ಎಂದು ಕೇಳಿಸಿಕೊಂಡ ಮನೆಯೊಡತಿಯದ್ದೋ ಅಥವಾ 'ಫಿನಾಯಿಲ್'  ಎಂದು ಕೇಳಿಸುವಂತೆ ನನ್ನ ಹೆಸರನ್ನು ಸಂಭೋದಿಸಿದ ಮಹೀತನದ್ದೋ ಅಥವಾ 'ಫಿನಾಯಿಲ್' ಉಚ್ಚರಣೆಗೆ ಹೋಲುವ ಹೆಸರಿರುವ ನನ್ನದೋ???

Thursday, February 24, 2011

ಹುಚ್ಚಾಟದ ಹೆಚ್ಚು ಹುಚ್ಚು! (೨೦೧೧)



ಕ್ರಿಕೆಟ್ಟಾಟವೆಂಬ ಹುಚ್ಚಾಟದ ಹುಚ್ಚು ಹೆಚ್ಚುವುದು ವಿಶ್ವಕಪ್ ಪಂದ್ಯಾವಳಿಯ ಸಮಯದಲ್ಲಿ. ಈ ಸಲ ಉಪಖಂಡದಲ್ಲಿ ಆಯೋಜಿಸಿರುವುದು ಭಾರತೀಯರಿಗೆಲ್ಲ ಹೆಮ್ಮೆ ಹಾಗು ಸಂತೋಷದ ವಿಷಯ. ಬರಗೆಟ್ಟಿದ್ದ ಬೆಂಗಳೂರಿಗರಿಗೆ ಭಾರತ - ಇಂಗ್ಲೆಂಡ್ ನಡುವಣ ಪಂದ್ಯ ಕೊಲ್ಕತ್ತಾದಿಂದ ಇಲ್ಲಿಗೆ ಸ್ಥಳಾಂತರವಾದ್ದರಿಂದ ಹುಚ್ಚು ಇಮ್ಮಡಿಯಾಗಿತ್ತು. ಈ ಹುಚ್ಚನ್ನು ಪರಿಪೂರ್ಣವಾಗಿ ಶಾಂತಗೊಳಿಸಲು ಎಲ್ಲರಿಗೂ ಬೇಕಿದ್ದ ದಾರಿ, ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸುವುದು! ಇದಕ್ಕೆ ವಿಟ್ಟಲ, ಮುರಳಿ, ಚಂದು ಹಾಗು ನಾನು ಸಿಕ್ಕ ಎಲ್ಲ ಹಾದಿಗಳನ್ನು ಸೋಸಿದರು ಫಲಗೂಡಲಿಲ್ಲ. ಕೊನೆಗೆ ಈ ಹುಚ್ಚನ್ನು ತಣಿಸಿಯೇ ತೀರಬೇಕೆಂದು ನಾನು ಮತ್ತು ಮುರಳಿ, ಇದ್ದ ಕೊನೆಯ ಹಾದಿ ಹಿಡಿದೆವು. ೨೪ನೇ ತಾರೀಕಿನಂದು ಬೆಳಗ್ಗೆ ೮ ಗಂಟೆಗೆ ಕ್ರೀಡಾಂಗಣದಲ್ಲಿ ಟಿಕೆಟ್ಟುಗಳನ್ನು ಹಂಚುತ್ತಾರೆ ಎಂಬ ವಿಷಯ ತಿಳಿದಿತ್ತು. ಹಿಂದಿನ ದಿನ ರಾತ್ರಿಯೇ ಅಲ್ಲಿ ಠಿಕಾಣಿ ಹೂಡಿ ಟಿಕೆಟ್ಟು ತರೋಣವೆಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಂದೆವು. ಸಮಯ ಸುಮಾರು ೧೦:೪೫, ನಾನು ನನ್ನ ಗಾಡಿಯನ್ನು ಗರುಡ ಮಾಲ್‌ನಲ್ಲಿ ನಿಲ್ಲಿಸಿ ಬಂದೆ. ರಾತ್ರಿಯೇ ಸರದಿಯಲ್ಲಿ ನಿಲ್ಲಲು ಬಿಡುತ್ತಾರೆಂದು ಭಾವಿಸಿ ಕಾಯುತ್ತಿದ್ದೆವು. ಆದರೆ ಪೋಲೀಸರಿಗೆ ಯಾವ ಹುಚ್ಚು ಹಿಡಿದಿತ್ತೋ ಯಾರನ್ನೂ ಸರದಿಯಲ್ಲಿ ನಿಲ್ಲಲು ಬಿಡುತ್ತಿರಲಿಲ್ಲ. ಲಾಠಿ ಪ್ರಯೋಗದಿಂದ ಎಲ್ಲರನ್ನು ಗುಲ್ಲೆಬ್ಬಿಸುತ್ತಿದ್ದರು. ಕ್ರೀಡಾಂಗಣದ ಬಳಿ ಎಲ್ಲಿ ನಿಂತರು ಬೈದು ಓಡಿಸುತ್ತಿದ್ದರು. ನಾವು ಕಬ್ಬನ್ ಪಾರ್ಕ್ ಒಳಗೆ ಹೋಗಿ ಸ್ವಲ್ಪ ಹೊತ್ತು ಕುಳಿತು ಆಮೇಲೆ ಬಂದು ನೋಡೋಣವೆಂದು ತೀರ್ಮಾನಿಸಿದೆವು. ಅಲ್ಲಿ ಒಂದು ದೊಡ್ಡ ಬಂಡೆಯ ಮೇಲೆ ಹತ್ತಿ ಕಾಲು ಚಾಚಿದೆವು! ಮೇಲೆ ಮರ, ಮಲಗಲು ಬಂಡೆ ಹಾಗೂ ಬೀಸುತ್ತಿದ್ದ ತಂಪಾದ ಗಾಳಿ ಆ ಜಾಗಕ್ಕೆ ಮತ್ತೊಮ್ಮೆ ಮಲಗಲಿಕ್ಕೋಸ್ಕರವಾದರು ಬರಬೇಕೆನ್ನುವಂತೆ ಭಾವ ಸೃಷ್ಟಿಸಿತ್ತು. ಅಷ್ಟರಲ್ಲಿ ಕ್ರೀಡಾಂಗಣದ ಬಳಿ ಕಿರುಚಾಟ ಶುರುವಾಯಿತು ನಾವು ಓಡಿಹೋಗಿ ನೋಡಿದರೆ ಎಲ್ಲರು ಸರದಿಯಲ್ಲಿ ನಿಲ್ಲಲು ಶುರು ಮಾಡಿದ್ದರು! ನಾವು ಸರದಿಗೆ ಸೇರಲು ಸಫಲರಾದೆವು. ನಮ್ಮ ಮುಂದೆ ಸುಮಾರು ೨೦೦-೨೫೦ ಜನರಿದ್ದರು. ಟಿಕೆಟ್ಟು ಖಂಡಿತ ಸಿಗುತ್ತದೆಯೆಂದು ಖುಷಿಯಿಂದ ಬೀಗುತ್ತಿದ್ದರೆ ಮತ್ತೆ ಲಾಠಿ ಪ್ರಹಾರ ಶುರುವಾಯಿತು! ಎಲ್ಲರು ಸರದಿ ಬಿಟ್ಟು ದಿಕ್ಕೆಟ್ಟು ಓಡಿದರು. ನಮಗೂ ಏನೂ ಮಾಡಲು ತಿಳಿಯದೆ ಕ್ರೀಡಾಂಗಣದ ಸುತ್ತ ಒಂದು ಸುತ್ತು ಹೊಡೆದು ಮತ್ತೆ ಉದ್ಯಾನವನದ ಬಂಡೆಗಲ್ಲಿನಮೇಲೆ ಹೋದೆವು. ಸಮಯ ೧:೩೦. ಇಬ್ಬರಿಗು ಕಣ್ಣುಗಳು ಎಳೆಯುತ್ತಿದ್ದರಿಂದ ತಂದಿದ್ದ ಹೊದಿಕೆಯನ್ನು ಎಳೆದು ಮಲಗಿದೆವು! ಆಹಾ ಎಂಥಾ ಸೊಗಸಾದ ನಿದ್ದೆ! ಮತ್ತೆ ೩:೩೦ ರ ಸುಮಾರಿಗೆ ಕಷ್ಟಪಟ್ಟು ಎಚ್ಚರ ಮಾಡಿಕೊಂಡು ಕ್ರೀಡಾಂಗಣದ ಬಳಿ ಬಂದೆವು. ರಾತ್ರಿ ಮಲಗಲಿಕ್ಕೆ ಮೊದಲು ಸುಮಾರು ಒಂದು ಸಾವಿರದ ಆಸುಪಾಸಿನಲ್ಲಿದ್ದ ಗುಂಪು ೧೦ನಾವಿರಕ್ಕಿಂತಲು ಜಾಸ್ತಿಯಾಗಿತ್ತು! ಪ್ರತಿ ೧೦-೧೫ ನಿಮಿಷಗಳಿಗೊಮ್ಮೆ ಜನರು ಸರದಿ ಮಾಡುವುದು ಪೋಲೀಸರು ಹೊಡೆದೋಡಿಸುವುದು ಇನ್ನೂ ನಡೆಯುತ್ತಲೇ ಇತ್ತು! ಕೊನೆಗೂ ೬ ಗಂಟೆಯ ಹೊತ್ತಿಗೆ ಪೋಲೀಸರು ಗುಂಪನ್ನು ತಡೆಯಲಾರದೆ ಸರದಿ ಮಾಡಲು ಅವಕಾಶ ಮಾಡಿಕೊಟ್ಟರು. ಈ ಸಮಯದಲ್ಲಿ ಎಲ್ಲರು ನುಗ್ಗಲು ಶುರು ಮಾಡಿದರು ಮುರಳಿ ನಾನು ಬೇರ್ಪಟ್ಟೆವು. ಕೊಡುವ ೮ ಸಾವಿರ ಟಿಕೆಟ್ಟುಗಳಿಗೆ ಬಂದಿದ್ದ ಸುಮಾರು ೪೦ ಸಾವಿರ ಜನರ ಗುಂಪನ್ನು ಹೇಗೆ ತಾನೆ ನಿಯಂತ್ರಿಸಲಾಗುತ್ತದೆ? ಕಾಲ್ತುಳಿತ ಶುರುವಾಯಿತು, ಅದ್ರುಷ್ಟವಶಾತ್ ನಾನು ಕೆಳಗೆ ಬೀಳಲಿಲ್ಲ. ಇಲ್ಲೆ ಇದ್ದರೆ ಸಾಯುತ್ತೇನೆಂದು ಸರದಿಯ ಬಳಿಯಿಂದ ದೂರ ಸರಿದೆ. ಮುರಳಿ ಕಾಣಿಸಲಿಲ್ಲ, ಕರೆ ಮಾಡಲು ಅವನಿಂದ ಉತ್ತರ ಬರಲಿಲ್ಲ. ಸ್ವಲ್ಪ ಸಮಯದ ನಂತರ ಅವನೇ ಕರೆ ಮಾಡಿದ. ಬಹುಶಃ ಅವನು ಸರದಿಯಲ್ಲಿರಬೇಕೆಂದು ಯೋಚಿಸಿ ಕೇಳಿದರೆ "ಮಗ ಬೇಗ ಬಾ, ನನ್ನ ಕಾಲು ಮುರಿದಿದೆ! ನಡಿಯಲಿಕ್ಕೆ ಆಗುತ್ತಿಲ್ಲ ಇಲ್ಲೆ ಪಾದಾಚಾರಿಮಾರ್ಗದಲ್ಲಿ ಕುಸಿದು ಕುಳಿತ್ತಿದ್ದೇನೆ" ಎನ್ನುವುದೇ. ಅವನ ಬಳಿಯೇ ಪೋಲೀಸರು ಲಾಠಿ ಬೀಸುತ್ತಿದ್ದರು. ಹತ್ತಿರ ಹೋಗಲು ಅಂಜಿಕೆ. ಹೇಗೋ ಧೈರ್ಯ ಮಾಡಿ ಅವನ ಬಳಿ ಹೋಗಿ ಹೆಗಲು ಕೊಟ್ಟು ಕರೆತರುತ್ತಿದ್ದೆ, ಅವನ ಕನ್ನಡಕ ಎಲ್ಲೋ ಬಿದ್ದುಹೋಯಿತು! "ಮಗ ಕನ್ನಡಕ ಬಿದ್ದೋಗಿದೆ ತುಳಿದು ಒಡೆದುಹಾಕುತ್ತಾರೆ ಹುಡುಕು" ಎಂದ. ನಾನು ಆ ಕತ್ತಲೆಯಲ್ಲಿ ಹುಡುಕಾಡುತ್ತಿದ್ದೆ, ಮುರಳಿಗೆ ಏನಾದರು ಕಾಣುತ್ತಿತ್ತೋ ಇಲ್ಲವೋ ತಿಳಿಯದು ಕೊನೆಗೂ ಕನ್ನಡಕ ಸಿಕ್ಕಿತು. ಜನಜಂಗುಳಿ ಕಡಿಮೆಯಿದ್ದ ಕಡೆ ಕೂರಿಸಿ, ಕುಡಿಯಲು ನೀರು ಕೊಟ್ಟು ನನ್ನ ಗಾಡಿ ತರಲು ಹೋದೆ.

ಮುರಳಿಗೆ ಗಾಡಿ ಏರಲೂ ಆಗುತ್ತಿಲ್ಲ! ಕೊನೆಗೆ ಹುಡುಗಿಯರು ಕೂರುವ ಶೈಲಿಯಲ್ಲಿ ಕುಳಿತ! ಕ್ರೀಡಾಂಗಣದಿಂದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಹೋದೆವು. ಎಲ್ಲಾ ಪರೀಕ್ಷೆ ಮಾಡಿಸಿದ ಬಳಿಕ ವರದಿಗಾಗಿ ಕಾಯುತ್ತಿದ್ದೆವು. ಮುರಳಿ "ಖಡಾ ಖಂಡಿತ ಕಾಲು ಮುರಿದಿದೆ, ಆ ಗಲಾಟೆಯಲ್ಲು ನನಗೆ ಮುರಿದ ಶಬ್ದ ಕೇಳಿಸಿತು, ಇನ್ನು ಮನೆಯಲ್ಲಿ ಏನೇನು ಅನ್ನಿಸಿಕೊಳ್ಳಬೇಕೋ, ಸ್ನೇಹಿತರ ವಲಯದಲ್ಲಿ ಬೇಕಿತ್ತಾ ಎಂದು ಹಂಗಿಸಲು ಶುರು ಮಾಡುತ್ತಾರೆ" ಎಂದು ಚಿಂತಾಕ್ರಾಂತನಾಗಿದ್ದ. ಸ್ವಲ್ಪ ಸಮಯದ ನಂತರ ಇಬ್ಬರೂ ಆಸ್ಪತ್ರೆಯಲ್ಲಿದ್ದ ಶುಶ್ರೂಷಕಿಯರನೆಲ್ಲಾ ನೋಡಿ ಒಕ್ಕಣೆ-ವಿವರಣೆಗಳನ್ನು ಹಂಚಿಕೊಳ್ಳುತ್ತಿದ್ದೆವು. ಶುಶ್ರೂಷಕಿಯರನೆಲ್ಲಾ ನೋಡಿ ಬೇಜಾರಾಗುವ ಹೊತ್ತಿಗೆ ಸರಿಯಾಗಿ ವೈಧ್ಯೆಯೊಬ್ಬಳು ಬಂದಳು! ಆದರೆ ಅವಳ ಹಿಂದೆ ತುರ್ತು ಪರಿಸ್ಥಿತಿಯ ರೋಗಿಯೊಬ್ಬರು ನಮ್ಮ ಕೋಣೆಗೆ ಬಂದರು. ಅವರ ನರಳಾಟ ನೋಡಲಾಗದೆ, ನಾನು ಆಚೆ  ಇರುತ್ತೇನೆ ನೀನು ಮಲಗಿಕೋ ಎಂದು ಹೇಳಿ ಹೊರಗೆ ಬಂದು ಕುಳಿತೆ. ನನಗೆ ನಿದ್ದೆ ತಡೆಯಲಾರದೆ ಖುರ್ಚಿಯಲ್ಲೆ ನಿದ್ದೆ ಹೋಗಿ ಶುಶ್ರೂಷಕಿಯರೆಲ್ಲಾ ಕನಸಲ್ಲಿ ಬಂದಿದ್ದರು!!! ವರದಿ ಬಂದ ಮೇಲೆ ತಿಳಿಯಿತು ಮೂಳೆ ಮುರಿದಿಲ್ಲ, ಅಸ್ಥಿಬಂಧಕ ಅಲುಗಿದೆಯೆಂದು. ಮುರಳಿಗೆ ಕೊನೆಗೂ ಖುಷಿಯಾಯಿತು, ಮನೆಯಲ್ಲಿ ಸ್ವಲ್ಪ ಕಡಿಮೆ ಹಿತವಚನಗಳನ್ನು ಕೇಳಬಹುದೆಂದು. ಅಂಥೂ ಹುಚ್ಚಾಟದ ಹುಚ್ಚಿನ ಹುಚ್ಚನಾಗಿ ಮತ್ತಷ್ಟು ಹುಚ್ಚರ ನಡುವೆ ಸಿಲುಕಿ ಕ್ರಿಕೆಟ್ ಆಟಕ್ಕೆ ೩ ದಿನ ಮುಂಚೆ‌ಯೇ ಮುರಳಿ ಗಾಯಾಳುವಾದ! ಚೇತರಿಸಿಕೊಳ್ಳಲು ೫ ದಿನಗಳ ಪೂರ್ಣ ವಿಶ್ರಾಂತಿ ಬೇಕಾಗಿದೆ.