ಮಳೆ ಬಿದ್ದರೆ ಬೆಂಗಳೂರಿನ ಬಹುತೇಕ ರಸ್ತೆಗಳು ಹೊಳೆಯಾಗಿರುತ್ತದೆ. ಮಳೆಯಲ್ಲಿ ನೆನೆಯುವುದು ನನಗೆ ಬಹಳ ಇಷ್ಟ. ಅದರಲ್ಲೂ ಕರೀಶ್ಮಾಳ ಜೊತೆ ನೆನೆಯುವುದೆಂದರೆ ಇನ್ನೂ ಪ್ರೀತಿ! ಆದರೆ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಓಡಿಸುತ್ತಾ ನೆನೆದರೆ ಸ್ವಲ್ಪ ಜಾಸ್ತೀನೆ ಗಲೀಜು ಆಗುತ್ತದೆ. ಅಕ್ಕ ಪಕ್ಕ ಹೋಗುವ ವಾಹನಗಳೆಲ್ಲಾ ರಸ್ತೆಯ ಮೇಲಿರುವ ಮಳೆ ನೀರನ್ನು ಹಾರಿಸುತ್ತ ಹೋಗುತ್ತವೆ. ಅದು ಮಳೆ ನೀರಾಗಿದ್ದರೆ ಜಾಸ್ತಿನೆ ಖುಷಿ ಆಗುತಿತ್ತು! ಆದರೆ ಅದು ಮಳೆ ನೀರಿನೊಂದಿಗೆ ಬೆರೆತಿರುವ ಚರಂಡಿ ನೀರು! ಬೇಸಿಗೆಯ ಮಳೆ ಸ್ವಲ್ಪ ಜೋರಾಗೆ ಆಗಿತ್ತು. ಇಂಥಾ ಸಮಯದಲ್ಲಿ ಶುಕ್ರವಾರ ಸಂಜೆ ಹೇಗೋ ಕೆಲಸವನ್ನು ಬೇಗ ಮುಗಿಸಿ ಮೈಸೂರಿಗೆ ಹೊರಟಿದ್ದೆ. ಕರೀಶ್ಮಾಳ ಜೊತೆಯೇ ಹೊರಟರೆ ಅಪ್ಪನಿಗೆ ಮನೆ ತಲುಪುವ ತನಕ ಭಯ; ಅದಕ್ಕೆ ಕರೀಶ್ಮಾಳನ್ನು ಚಿಕ್ಕಪ್ಪನ ಮನೆಯಲ್ಲಿ ಬಿಟ್ಟು ಅವರ ಜೊತೆ ಸ್ವಲ್ಪ ಹೊತ್ತು ಮಾತನಾಡಿ ಬಸ್ಸಿನಲ್ಲಿ ಹೊರಡುವುದು ರೂಢಿ. ಇನ್ನೂ St.Johns signal ಬಳಿ ಇದ್ದೆ, ಇನ್ನೇನು ದಾಟಬೇಕಿತ್ತು ಸೂಚನೆ ಕೆಂಪಾಯಿತು. St.Johns signal ನಿಂದ Forum mall ರಸ್ತೆಗೆ ಹೋಗಬೇಕಿತ್ತು, ದ್ವಿಮುಖ ರಸ್ತೆಯ ಬಲ ಬದಿಯಲ್ಲಿ ನಿಂತಿದ್ದೆ. ನನ್ನ ಪಕ್ಕದಲ್ಲಿ ರಸ್ತೆ ವಿಭಜಕ, ಅದರ ಪಕ್ಕದಲ್ಲಿ ಕೊಚ್ಚೆ ಯಾವುದೇ ವಾಹನ ಹೋದರೂ ಸಿಡಿದು ನನ್ನನ್ನು ಗಲೀಜು ಮಾಡಲು ಹಾತೊರೆಯುತ್ತಿರುವಂತಿತ್ತು! ಕೊಚ್ಚೆಯ ನೀರಿನಲ್ಲಿ ಕಾಣುತ್ತಿದ್ದ ನನ್ನ ಬಿಂಬ ಶಿರಸ್ತ್ರಾಣದ ಮರೆಯಲ್ಲಿ ನಗುತ್ತಿರುವಂತೆ ಭಾಸವಾಯಿತು! ಅದೇ ಸಮಯಕ್ಕೆ ಸರಿಯಾಗಿ ಯಾವುದೋ ವಾಹನ ಜೋರಾಗಿ ನನ್ನ ಪಕ್ಕ ಹೋಗಲು ಕೊಚ್ಚೆ ನನ್ನ ಮೇಲೆ ಸಿಡಿಯಿತು! ಈಗ ನನ್ನ ಬಿಂಬ ನನ್ನನ್ನು ನೋಡಿ ನಿಜವಾಗಿಯು ನಗಲು ಶುರು ಮಾಡಿತ್ತು, ಯಾಕೆಂದರೆ ನನ್ನ ಬೆಪ್ಪು ತನಕ್ಕೆ ನಾನೇ ನಗಲು ಶುರು ಮಾಡಿದ್ದೆ!! ಅದೃಷ್ಟಕ್ಕೆ ನನ್ನನ್ನು ನೋಡಿ ನಗಲು ಪಕ್ಕದಲ್ಲಿ ಯಾರೂ ಇರಲಿಲ್ಲ, ಸ್ವಲ್ಪ ದೂರದಲ್ಲಿ ಇದ್ದ ಜನಕ್ಕೆ ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲೆ ನನ್ನ ಸುತ್ತ ಮುತ್ತಲೆಲ್ಲಾ ವಾಹನಗಳು ತುಂಬಿಕೊಂಡವು, ದ್ವಿಚಕ್ರ ವಾಹನಗಳೇ ಜಾಸ್ತಿ. ಎದುರಿನಿಂದ ಮತ್ತೊಂದು ವಾಹನ ಕೊಚ್ಚೆಯ ಬಳಿಯೆ ಬರುತ್ತಿತ್ತು! ಅದನ್ನು ಗಮನಿಸಿದ ನಾನು ಪಕ್ಕಕ್ಕೆ ಇಳಿದು ಕರೀಶ್ಮಾಳ ಮರೆಯಲ್ಲಿ ಅವಿತುಕೊಂಡೆ. ನನಗೆ ಕೊಚ್ಚೆ ಹಾರಲಿಲ್ಲ, ನನ್ನ ಹಿಂದೆ ಸಾಲಾಗಿ ನಿಂತಿದ್ದವರೆಲ್ಲರಿಗೂ ಕೊಚ್ಚೆಯ ಸ್ಪೋಟವೇ ಆಯಿತು! ಅದರಲೊಬ್ಬ ಹಾರಿಸಿದವನಿಗೆ ಸಂಸ್ಕೃತ ಹಿತವಚನಗಳನ್ನು ನೀಡಿದ. ಇನ್ನೊಬ್ಬ ನನ್ನನ್ನು ನೋಡಿ "ಬುದ್ಧಿವಂತರು ಸಾರ್ ನೀವು" ಎಂದ!!! ಅವನಿಗೇನು ತಿಳಿದಿತ್ತು ನಿಮಿಷದ ಹಿಂದೆಯಷ್ಟೆ ಬೆಪ್ಪನಾಗಿದ್ದೆ ಎಂದು!!! ಅವನಿಗೆ ಚಿಕ್ಕ smile ನೀಡಿ ಯೋಚಿಸಿದೆ, ನಿಜ ಎನಿಸಿತು "Experience makes man (not WOMAN) better!!!" ಅಂಥ! ಚಿಕ್ಕಪ್ಪನ ಮನೆ ತಲುಪಿ ಒದ್ದೆ ಬಟ್ಟೆಗಳನೆಲ್ಲಾ ಬದಲಿಸಿ ಶುಭ್ರವಾದೆ. ಚಿಕ್ಕಮ್ಮ ನೀಡಿದ ಕಾಫಿ ಹೀರುತ್ತಾ ಅವರೊಂದಿಗೆ ಮಾತನಾಡುತ್ತಾ ಕಾಲ ಕಳೆದೆ. ಬೆಳಗ್ಗೆ ಬೇಗ ಎದ್ದು ಹೊರಡುವುದೆಂದು ತೀರ್ಮಾನಿಸಿದೆ.
ಮುಂಜಾನೆಯೂ ಮಳೆ ಹನಿಯುತ್ತಲೆ ಇತ್ತು. ನಾಯಂಡಹಳ್ಳಿಯಲ್ಲಿ ಬಸ್ಸು ಹತ್ತುವುದು ನನಗೆ ಖಾಯಮ್ಮು. ಮಳೆಯಿಂದ ನಾಯಂಡಹಳ್ಳಿಯ ಸುತ್ತೆಲ್ಲಾ ಗಬ್ಬಾಗಿತ್ತು. ಸಧ್ಯ ಮೋರಿ ಉಕ್ಕಿರಲಿಲ್ಲ! ನಿಲುಗಡೆಯತ್ತ ಇನ್ನೇನು ತಲುಪಬೇಕು ಒಂದು ಹೊಂಡದೊಳಕ್ಕೆ ಕಾಲಿಟ್ಟೆ! ದುರಾದೃಷ್ಟ ಅನ್ನುವುದಕ್ಕಿಂತ ಅದೃಷ್ಟ ಎನ್ನಬೇಕು, ನಾಯಂಡಹಳ್ಳಿಯಲ್ಲಿ ಚರಂಡಿ ನೀರಿಲ್ಲದ ಒಂದು ಹೊಂಡ! ಹೊಂಡದ ಪೂರ್ತಿ ಕೆಸರಿತ್ತು. ಮಂಡಿಯವರೆಗೂ ಕೆಸರಾದ ಕಾಲನ್ನು ಎಲ್ಲಿ ತೊಳೆಯುವುದೋ ತೋಚಲಿಲ್ಲ. ನಾಯಂಡಹಳ್ಳಿಯ ಯಾವ ರಸ್ತೆಯಲ್ಲಿ ನಲ್ಲಿ ಇದೆಯೋ, ಇದ್ದರು ಯಾವ ನಲ್ಲಿಯಲ್ಲಿ ನೀರು ಬರುತ್ತದೊ ಯಾರಿಗೆ ಗೊತ್ತು! ೨ ನಿಮಿಷ ಯೋಚಿಸಿ ಸಮೀಪದಲ್ಲಿದ್ದ ಬೇಕರಿಯಲ್ಲಿ ೨ ಲೀಟರ್ bisleri bottle ಖರೀದಿಸಿದೆ! ಬೆಂಗಳೂರಿನಲ್ಲಿ ಸ್ನಾನ ಮಾಡುವುದಕ್ಕೆ ಗಡಸು ನೀರು, ನಾಯಂಡಹಳ್ಳಿಯಲ್ಲಿ ಕೆಸರಾದ ನನ್ನ ಕಾಲು ತೊಳೆಯಲು ಬಿಸ್ಲೇರಿ ನೀರು!. ಹೇಗೋ ಸ್ವಚ್ಛವಾಗಿ ಒದ್ದೆ ಬೂಟ್ಸಿನಲ್ಲೆ ಬಸ್ಸನ್ನು ಹತ್ತಿದೆ, ಚೀಟಿ ಚೀಟಿ ಎಂದು ಬಡಿದುಕೊಳ್ಳುತ್ತಿದ್ದ ನಿರ್ವಾಹಕನಿಂದ ಮೈಸೂರಿಗೆ ticket ಪಡೆದು ನೆಮ್ಮದಿಯ ಉಸಿರು ಬಿಟ್ಟೆ. ಒದ್ದೆಯಾಗಿದ್ದ ನನ್ನ jacket ಅನ್ನು plastic coverನೊಳಗೆ ಹಾಕಿ bagನೊಳಗೆ ತುರುಕಿದೆ. ರಾಜರಾಜೇಶ್ವರಿ ನಗರದ ಹೆಬ್ಬಾಗಿಲ ಬಳಿ ಒಂದು ಹುಡುಗಿ ಬಸ್ಸನ್ನು ಏರಿ ಖಾಲಿಯಿದ್ದ ನನ್ನ ಮುಂದಿನ ಬಲ ಆಸನದಲ್ಲಿ ಕುಳಿತಳು. ಅಷ್ಟು ಚೆಂದವಿರುವ ಹುಡುಗಿ; ಎಂದಿನಂತೆ ನನ್ನ ಗಮನ ಅವಳೆಡೆಗೆ ಕೇಂದ್ರೀಕೃತವಾಯಿತು ಮೂರು ತಾಸು ಸಮಯ ಕಳೆಯುವುದು ಕಷ್ಟವಲ್ಲ ಎನಿಸಿತು! ಆಕೆಯೂ ತನ್ನ ಒದ್ದೆಯಾದ jacket ಅನ್ನು ಕಳಚಿ ಸೀಟಿನಲ್ಲೆ ಒಣಗಲು ಹಾಕಿದಳು. ಏನಾದರೂ ಮಾತನಾಡಿಸುತ್ತಾಳ ಅಥವಾ ನಾನೇ ನೆಪವೊಡ್ಡಿ ಎನಾದರು ಮಾತಿಗೆಳೆಯೆಲಾ ಹೀಗೆ ನಾನಾ ರೀತಿಯಲ್ಲಿ ಯೋಚಿಸುತ್ತಾ ಪ್ರಯಾಣಿಸಿದೆ. ಶ್ರೀರಂಗಪಟ್ಟಣ ದಾಟಿದ ಮೇಲೂ ಕನಿಷ್ಟ, ದೃಷ್ಟಿಗಳ ಮಿಲನವೂ ಆಗಲಿಲ್ಲ, ಇದು ಇಲ್ಲಿಗೆ ಮುಗಿದ ಕಥೆ ಯೋಚಿಸಬಾರದು ಎಂದು ಸುಮ್ಮನಾದೆ.
ಸಾಮಾನ್ಯವಾಗಿ ಎಂದೂ ಕಾಣದ ticket checkingನವರು ಬಸ್ಸೇರಿದರು! ನನ್ನ ಬಳಿ ಬರಲು, ಸುಮ್ಮನೆ ನನ್ನ ಸಮಯ ಹಾಳು ಮಾಡುತ್ತಾರೆ ಎಂದು ಗೊಣಗಿಕೊಂಡೇ wallet ತೆರೆದೆ. ಅಲ್ಲಿ ticket ಇರಲಿಲ್ಲ, ಜೇಬಿನಲ್ಲೆಲ್ಲಾ ಹುಡುಕಿದೆ, ಸಿಗಲೇಇಲ್ಲ! ಈಗ ನಾನು ಅವರ ಸಮಯ ಹಾಳು ಮಾಡುತ್ತಿದ್ದೇನೆ ಎನಿಸಿತು. "ಸಾರ್ ticket ಕೊಂಡಿದ್ದೆ ಕಾಣುತ್ತಿಲ್ಲ", "ಚೀಟಿ ತೋರಿಸು ಇಲ್ಲದ್ದಿದ್ದರೆ ದಂಡ ಹಾಕುತ್ತೇನೆ", "ಸಾರ್ ನನ್ನ ನೋಡಿದರೆ ticket ಕೊಳ್ಳದೆ ಪ್ರಯಾಣಿಸುವವನ ರೀತಿ ಕಾಣುತ್ತೀನಾ, ಪ್ರತಿ ವಾರ ಮೈಸೂರಿಗೆ ಓಡಾಡುತ್ತೇನೆ ticket ಕೊಳ್ಳದೆ ಯಾವ ದಿನವು ಪ್ರಯಾಣಿಸಿಲ್ಲ", "ನಿನ್ನಂಥಾ ಸಾವಿರಾರು ಜನರನ್ನ ನೋಡಿದ್ದೇವೆ, ಸೂಟು - ಬೂಟು ಹಾಕಿಕೊಂಡು ಚೀಟಿ ಕೊಳ್ಳದೆ ಸಿಕ್ಕಿ ಬಿದ್ದಿದ್ದಾರೆ ನೀನೇನು ಮಹಾ! ಪ್ರತಿ ವಾರ ಓಡಾಡುವವನಿಗೆ ಚೀಟಿ ಜೋಪಾನ ಮಾಡುವುದು ಗೊತ್ತಿಲ್ಲವಾ! ಸುಮ್ಮನೆ ನಮ್ಮ ಸಮಯ ಹಾಳು ಮಾಡಬೇಡ ದಂಡ ಕಟ್ಟು ಇಲ್ಲ ಚೀಟಿ ತೋರಿಸು", "ಸಾರ್ ನಿರ್ವಾಹಕರನ್ನೆ ಕೇಳಿ ನಾನು ticket ಕೊಂಡಿದ್ದೇನೆ", "ಸಾರ್ ಚೀಟಿ ಕೊಟ್ಟಿರೋದು ಜ್ನಾಪಕ ಇದೆ ಆದರೆ ನೀವು ಅದನ್ನು ತೋರಿಸದಿದ್ದರೆ ದಂಡ ಕಟ್ಟಲೇಬೇಕು", ನಿರ್ವಾಹಕ ಹೇಳಿದ. "ಸಾರ್ ಮತ್ತೊಂದು ticket ಕೊಡಿ ದುಡ್ಡು ಕೊಡುತ್ತೇನೆ", "ಸಾರ್ ಮತ್ತೊಂದು ಸಲ ಚೀಟಿ ಕೊಟ್ಟರೆ ಸಾಮರ್ಥ್ಯಕ್ಕಿಂತ ಜಾಸ್ತಿ ಜನರನ್ನು ಹತ್ತಿಸಿದ್ದೀಯ ಎಂದು ನನಗೆ ದಂಡ ಹಾಕುತ್ತಾರೆ ನನ್ನನ್ನು ಮಧ್ಯ ಎಳೆಯಬೇಡಿ" ಹೀಗೆ ಮಾತಿಗೆ ಮಾತುಗಳನ್ನಾಡುತ್ತಾ ಮೈಸೂರಿನ ಬಸ್ಸು ನಿಲ್ದಾಣ ತಲುಪಿದೆವು. ಇನ್ನು ಇವರಿಗೆ ದಂಡ ಕಟ್ಟಬೇಕು ಇಲ್ಲವೆ ಲಂಚ ಕೊಡಬೇಕು, ಇದು ಒಳ್ಳೆ ಪೀಕಲಾಟವಾಯಿತಲ್ಲ ಎಂದು ಯೋಚಿಸುತ್ತಿರಬೇಕಾದರೆ ನನ್ನ ಗಮನ ಮತ್ತೆ ಆ ಹುಡುಗಿಯ ಬಳಿ ಹೋಯಿತು. ಅವಳು ಇಳಿಯಲು ಅಣಿಯಾಗುತ್ತಾ ತನ್ನ jacket ಹಾಕಿಕೊಂಡಳು. ಆಗ ನನಗೆ ಹೊಳೆಯಿತು! ನನ್ನ ticket jacket ಒಳಗಿದೆ ಎಂದು! checking ನವರು ನನ್ನನ್ನು ಬೈಯುತ್ತಲೆ ಮಾಯವಾದರು. ಈ ಹುಡುಗಿಯಿಂದ ಏನೋ ಒಂದು ಒಳ್ಳೆಯದಾಯಿತಲ್ಲ ಅವಳಿಗೆ ದನ್ಯವಾದ ಹೇಳಿ ಈ ನೆಪದಲ್ಲಾದರು ಮಾತನಾಡಿಸಬೇಕು ಎಂದು ಬಸ್ಸಿನಿಂದ ಕೆಳಗಿಳಿದು ಹುಡುಕಿದೆ, ತಡವಾಗಿತ್ತು ಆಕೆಯೂ ಮಾಯವಾಗಿದ್ದಳು ಮಳೆ ಮಾತ್ರ ಇನ್ನೂ ಹನಿಯುತ್ತಲೇ ಇತ್ತು!